ಭೋಗ್ಯ-ಕರಾರು ಒಪ್ಪಂದದಿಂದ ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ 25000 ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramiaha--01

ಬೆಂಗಳೂರು, ಮಾ.18-ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿರುವ ಭೋಗ್ಯ ಮತ್ತು ಕರಾರು ಒಪ್ಪಂದದ ಬದಲಾವಣೆಯಿಂದಾಗಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಹೆಚ್ಚಿದ್ದು, 25 ಸಾವಿರ ಕೋಟಿಯಷ್ಟು ಬಂಡವಾಳ ಹರಿದುಬರುವ ನಿರೀಕ್ಷೆ ಇದೆ ಎಂದು ಕಾಸಿಯಾ ಅಧ್ಯಕ್ಷ ಎ.ಪದ್ಮನಾಭ ತಿಳಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು-ಮೂರು ವರ್ಷಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆಯಾಗಿರಲಿಲ್ಲ. ಆದರೆ ಈ ಬಾರಿಯ ಬಜೆಟ್‍ನಲ್ಲಿ ನಿಯಮ ಬದಲಾವಣೆಯಿಂದಾಗಿ ಈ ಕೇತ್ರಕ್ಕೆ ಸಾಕಷ್ಟು ಉತ್ತೇಜನ ದೊರೆತಿದ್ದು, ಇದರಿಂದ ಹೆಚ್ಚಿನ ಬಂಡವಾಳಗಳು ಹರಿದುಬರಲಿದೆ. 2018ರ ಮಾರ್ಚ್ ವೇಳೆಗೆ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಈ ಪ್ರಮುಖ ಬದಲಾವಣೆಯಿಂದಾಗಿ ಸುಮಾರು 30 ಸಾವಿರ ಸ್ಟಾರ್ಟಪ್ ಕಂಪೆನಿಗಳು ಆರಂಭಗೊಳ್ಳಲಿವೆ. ಈಗಾಗಲೇ 5.60 ಲಕ್ಷ ಸಣ್ಣ ಕೈಗಾರಿಕೆಗಳು 42 ಲಕ್ಷ ಮಂದಿಗೆ ಉದ್ಯೋಗ ನೀಡಿವೆ. ಕೃಷಿ ವಲಯ ಹೊರತುಪಡಿಸಿದರೆ ಸಣ್ಣ ಕೈಗಾರಿಕೆಗಳೇ ಅತಿ ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದೆ ಎಂದು ಮಾಹಿತಿ ನೀಡಿದರು.  ಈ ಹಿಂದೆ 99ವರ್ಷಕ್ಕೆ ಭೋಗ್ಯಕ್ಕೆ ನೀಡಲಾಗುತ್ತಿತ್ತು. ಭೂಮಿ ನೀಡುವ ಬಗ್ಗೆ ಇದ್ದ ಈ ನಿಯಮ ಸಡಿಲಿಸಿ ಭೋಗ್ಯ ಹಾಗೂ ಕರಾರು ಒಪ್ಪಂದ ಮಾಡಿಕೊಳ್ಳುವ ನಿಯಮ ರೂಪಿಸಿರುವುದು ಈ ಬದಲಾವಣೆಗೆ ಕಾರಣ ಎಂದರು.

ಪ್ರಮುಖವಾಗಿ ಕೆಐಎಡಿಬಿ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಭೂಮಿ ಹಂಚಿಕೆ ಮಾಡುವಾಗ 99 ವರ್ಷ ಭೋಗ್ಯಕ್ಕೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದರಿಂದ ಸಣ್ಣ ಕೈಗಾರಿಕೆಗಳ ಮೇಲೆ ಅಡ್ಡಪರಿಣಾಮವಾಗಿದ್ದು, ಬಂಡವಾಳ ಹೂಡಿಕೆಗೆ ಹಿನ್ನಡೆಯಾಗಿತ್ತು. ಮುಖ್ಯಮಂತ್ರಿಗಳು 2017-18ನೆ ಸಾಲಿನ ಬಜೆಟ್‍ನಲ್ಲಿ ಈ ನಿಯಮ ಸಡಿಲಿಸಿ ಎರಡು ಎಕರೆವರೆಗೂ ಸಣ್ಣ ಕೈಗಾರಿಕೆಗಳಿಗೆ ಭೂಮಿಯನ್ನು 10 ವರ್ಷಗಳ ಅವಧಿಗೆ ಭೋಗ್ಯ ಮತ್ತು ಕರಾರು ಒಪ್ಪಂದ ಮಾಡಿಕೊಡುವ ನಿರ್ಣಯ ಮಾಡಿದ್ದಾರೆ ಇದು ಸ್ವಾಗತಾರ್ಹ ಎಂದರು.

ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ, ಭೂಮಿ ಭೋಗ್ಯ ಮತ್ತು ಖರೀದಿ ನಿಯಮಾವಳಿಗಳ ಸಡಿಲಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಬಜೆಟ್‍ನಲ್ಲಿ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಭಿನಂದಿಸಲಿದೆ ಎಂದು ಹೇಳಿದರು.
ಬಜೆಟ್ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಜಾರಕಿ ಹೊಳಿ ಅವರನ್ನು ಭೇಟಿ ಮಾಡಿ ಹಲವಾರು ಬೇಡಿಕೆಗಳ ಪಟ್ಟಿ ಸಲ್ಲಿಸಲಾಗಿತ್ತು. ಅವುಗಳಲ್ಲಿ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಇದರಿಂದಾಗಿ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗಿದೆ ಎಂದು ಹೇಳಿದರು. ಕೈಗಾರಿಕಾ ಕ್ಷೇತ್ರಕ್ಕೆ ಸೇರಿದಂತೆ ಎಲ್ಲವೂ ಒಂದೇ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದವು. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಈ ಇಲಾಖೆಯಲ್ಲಿ ಕಲಸ ಮಾಡಿಸಿಕೊಳ್ಳಲು ಸಾಕಷ್ಟು ತೊಂದರೆಗಳಿತ್ತು. ಇದನ್ನು ಬಗೆಹರಿಸಲು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಿರುವುದು ಅಭಿನಂದನಾರ್ಹ.

ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸಿ ಸ್ಥಾಪನೆಗೆ 5 ಕೋಟಿ ವಿಶೇಷ ಅನುದಾನ, ಮಹಿಳಾ ಉದ್ಯಮಿಗಳಿಗೆ ಉತ್ತೇಜನ, ಶೇ.4ರ ಬಡ್ಡಿ ದರದಲ್ಲಿ ಸಾಲವನ್ನು 50 ಲಕ್ಷದಿಂದ 2 ಕೋಟಿಗೆ ಹೆಚ್ಚಿಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ಬಿಸಿನೆಸ್ ಇನ್‍ಕ್ಯುಬೇಟರ್, ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಸಾಕಷ್ಟು ಉತ್ತೇಜನ ನೀಡಲಾಗಿದೆ. ಮುಖ್ಯಮಂತ್ರಿಗಳ ಈ ನಡೆ ಸ್ವಾಗತಾರ್ಹ. ಕಾಸಿಯಾ ಅವರನ್ನು ಅಭಿನಂದಿಸುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಸಿಯಾ ಉಪಾಧ್ಯಕ್ಷ ಆರ್. ಹನುಮಂತೇಗೌಡ, ಗೌರವ ಕಾರ್ಯದರ್ಶಿ ಪ್ರವೀಣ್, ಜಂಟಿ ಕಾರ್ಯದರ್ಶಿ ಲಿಂಗಣ್ಣ ಬಿರಾದಾರ, ಖಜಾಂಚಿ ಮುರಳಿ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin