ಭ್ರಷ್ಟಾಚಾರದಿಂದ ಸಮಾಜದಲ್ಲಿ ಅಶಾಂತಿ : ಸಂತೋಷ್ ಹೆಗಡೆ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.10- ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲೂ ವಿಶ್ವಾಸಾರ್ಹತೆ ಕಡಿಮೆಯಾಗಿರುವುದರಿಂದ ಸಮಾಜ ಅಶಾಂತಿಯತ್ತ ಮುನ್ನಡೆಯುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ.ಬಿಜಿಎಸ್ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಹಾಗೂ ಬಿಜಿಎಸ್ ವೈಭವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ರೂಪುಗೊಂಡಿರುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೂ ಜನರ ವಿಶ್ವಾಸದಿಂದ ಬೆಳೆದುಬಂದಿರುವ ಮಾಧ್ಯಮ ರಂಗ ಇತ್ತೀಚೆಗೆ ಭ್ರಷ್ಟಗೊಂಡಿವೆ ಎಂದು ವಿಷಾದಿಸಿದರು.

ಎಷ್ಟೇ ಆಧುನೀಕತೆ ಬೆಳೆದರೂ ದೇಶದ ಬಹುತೇಕ ಪ್ರದೇಶಗಳಲ್ಲಿ ಇಂದಿಗೂ ಕುಡಿಯುವ ನೀರಿಗಾಗಿ ಹತ್ತಾರು ಕಿಲೋಮೀಟರ್ ನಡೆದು ಹೋಗಬೇಕಾದ ದುಸ್ಥಿತಿ ಇದೆ. ಕುಡಿಯುವ ನೀರಿಗೆ ಬಿಡುಗೆಯಾಗುವ ಸಾವಿರಾರು ಕೋಟಿ ಅನುದಾನವನ್ನು ಭ್ರಷ್ಟರು ಕೊಳ್ಳೆಯೊಡೆಯುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ತಮ್ಮವರ ಶವ ಪಡೆಯಲು ಹಣ ನೀಡಬೇಕಾಗಿರುವುದು ನಮ್ಮ ದೇಶದ ದೌರ್ಭಾಗ್ಯವೇ ಸರಿ ಎಂದರು. ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು ಎಂಬ ಉದ್ದೇಶದಿಂದಲೇ ನಾನು ಇದುವರೆಗೂ 800ಕ್ಕೂ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಉತ್ತಮ ವಿಚಾರ ಬಿತ್ತುವ ಕೆಲಸ ಮಾಡುತ್ತಿದ್ದೇನೆ. ನನ್ನ ಜೀವ ಇರುವವರೆಗೂ ಈ ಕಾಯಕವನ್ನೇ ಮುಂದುವರೆಸುತ್ತೇನೆ ಎಂದು ಶಪಥ ಮಾಡಿದರು.

ನಾನೇನಾದರೂ ಆತ್ಮ ಚರಿತ್ರೆ ಬರೆದರೆ ಅದಕ್ಕೆ ಪ್ರಜಾಪ್ರಭುತ್ವದಲ್ಲಿ ನಾನು ಯಾರು? ಎಂಬ ಹೆಸರಿಡುತ್ತೇನೆ ಎಂದು ಸಂತೋಷ ಹೆಗಡೆ ನುಡಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಶಾಸಕ ಹೆಚ್.ಎಸ್. ಪ್ರಕಾಶ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಪಿ. ಮೋಹನ್, ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನಿಲ್ ಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಡಿಡಿಪಿಐ ಕಾಂತರಾಜು, ಬಿಇಒ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin