ಭ್ರಷ್ಟ ಸಚಿವರನ್ನು ಕೈಬಿಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Protest--01

ಬೆಂಗಳೂರು, ಆ.18-ಭ್ರಷ್ಟಾಚಾರ ಆರೋಪ ಹೊತ್ತ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಇಂದು ಬಿಜೆಪಿ ನಗರ ಘಟಕ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಭ್ರಷ್ಟ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಲಾಯಿತು.   ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಎಸಿಬಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಎಫ್‍ಐಆರ್ ಹಾಕಲಿ ಎಂದು ಸವಾಲು ಹಾಕಿದರು. ಪೊಲೀಸರ ವರ್ಗಾವರ್ಗಿಯಲ್ಲಿ ಭ್ರಷ್ಟಾಚಾರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗನಿಗೆ ಲ್ಯಾಬ್ ವ್ಯವಸ್ಥೆ ಕಲ್ಪಿಸುವಲ್ಲಿ ಅಕ್ರಮ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಪುತ್ರನ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಲಿ ಎಂದರು.

ಇನ್ನು 100 ಎಫ್‍ಐಆರ್ ಹಾಕಿದರೂ ನಾವು ಅದನ್ನು ಎದುರಿಸಲು ಸಿದ್ಧ. ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಇಂಧನ ಇಲಾಖೆ ನಿರ್ವಹಣೆಯಲ್ಲಿ ನಮ್ಮಿಂದ ಯಾವುದೇ ಲೋಪವಾಗಿಲ್ಲ. ಯಾವುದೇ ಅವ್ಯವಹಾರವನ್ನೂ ನಡೆಸಿಲ್ಲ. ಜಾಗತಿಕ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಯಾರೋ ಚಿಕ್ಕಪ್ಪನ, ದೊಡ್ಡಪ್ಪನ ಮಕ್ಕಳಿಗೆ ಗುತ್ತಿಗೆ ನೀಡಿಲ್ಲ ಎಂದು ಹೇಳಿದ ಅವರು, ಇಲಾಖೆಯಲ್ಲಿ ಯಾವುದೇ ಹಗರಣವನ್ನು ನಾವು ನಡೆಸಿಲ್ಲ ಎಂದು ತಿಳಿಸಿದರು.

BJP-Protest--03
ರಾಜ್ಯಕ್ಕೆ ಕೇಂದ್ರದಿಂದ ಬಂದಿರುವ ಸಾಕಷ್ಟು ಅನುದಾನವನ್ನು ಲೂಟಿ ಹೊಡೆಯಲಾಗಿದೆ. 2.09 ಕೋಟಿಯಷ್ಟು ಅನುದಾನವನ್ನು ಕೇಂದ್ರ ಒದಗಿಸಿದ ಇತಿಹಾಸ ಇಲ್ಲ. ಆದರೆ ಈಗಿನ ಕೇಂದ್ರ ಸರ್ಕಾರ ರಾಜ್ಯಕ್ಕೆ ಇಷ್ಟೆಲ್ಲ ಹಣ ಒದಗಿಸಿದ್ದರೂ ಲೆಕ್ಕ ಕೊಡಿ ಎಂದರೆ ಕೇಳುವವರೇ ಇಲ್ಲ. ಬೆಂಗಳೂರಿನ ರಸ್ತೆ ಚರಂಡಿಗಳ ಹೂಳೆತ್ತದೆ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ಆರೋಪಿಸಿದರು.

BJP-Protest--02
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳ್ಳರ ಗುಂಪಿನ ನಾಯಕ. ಅನೇಕ ಸಚಿವರು ಹಾಗೂ ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪವಿದ್ದರೂ ಅವರನ್ನೇ ಸಂಪುಟದಲ್ಲಿರಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಐಟಿ ದಾಳಿ ನಡೆದ ವೇಳೆ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ 300 ಕೋಟಿ ಹಾಗೂ ರಮೇಶ್ ಜಾರಕಿ ಹೊಳಿ ಮನೆಯಲ್ಲಿ 150 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರೆನ್ನಲ್ಲ ರಕ್ಷಿಸುತ್ತಿರುವ ಸಿದ್ದರಾಮಯ್ಯ ಕಳ್ಳರ ಗುಂಪಿನ ನಾಯಕ ಎಂಬ ಭಾವನೆ ಜನರಲ್ಲಿದೆ ಎಂದರು. ರಾಜ್ಯಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.  ಸಿ.ಟಿ.ರವಿ ಮಾತನಾಡಿ, ಸಿದ್ದರಾಮಯ್ಯ ಬುರುಡೆ ಬಿಡುವ, ಉಡಾಫೆ ಮಾತನಾಡುವ ರಾಮಯ್ಯ ಎಂದು ಹೇಳಿದರು.

Facebook Comments

Sri Raghav

Admin