ಮಂಗಳೂರಲ್ಲಿ ಅಮಿತ್ ಷಾಗೆ ಪ್ರತಿಭಟನೆ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Amith-sha

ಮಂಗಳೂರು, ಆ.21-ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ತಿರಂಗಾ ಯಾತ್ರೆಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಪ್ರತಿಭಟನೆ ಬಿಸಿ ತಟ್ಟಿತು. ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಅಮಾಯಕರ ಮೇಲಿನ ದೌರ್ಜನ್ಯ ಹಾಗೂಕೊಲೆಯಂತಹ ಘಟನೆಗಳನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅಮಿತ್ ಷಾ ಅವರು ವಾಸ್ತವ್ಯ ಹೂಡಿದ್ದ ಸರ್ಕಿಟ್ಹೌಸ್ ಎದುರು ಇಂದು ಬೆಳಗ್ಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.  ಸರ್ಕಿಟ್ ಹೌಸ್ ಮುಂಭಾಗ ಜಮಾಯಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಗೋಮಾತೆ ರಕ್ಷಣೆ ಹೆಸರಿನಲ್ಲಿ ಕಪಟ ನಾಟಕವಾಡುತ್ತಿರುವ ನಕಲಿ ಗೋ ರಕ್ಷಕರು ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಶಾಂತಿ, ನೆಮ್ಮದಿಯಿಂದ ಇದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಕೊಲೆ, ಸುಲಿಗೆಯಂತಹ ಘಟನೆಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಸಂಘ ಪರಿವಾರದವರು ದಲಿತರ ಮೇಲೆ ದೌರ್ಜನ್ಯ, ಅಮಾನುಷ ಹಲ್ಲೆ ನಡೆಸುತ್ತಾರೆ. ಕಪಟ ರಾಷ್ಟ್ರಪ್ರೇಮ ಪ್ರದರ್ಶಿಸುತ್ತಾರೆ, ಅಮಿತ್ ಷಾ ಅವರ ಮಂಗಳೂರು ಭೇಟಿ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಆರೋಪಿಸಿದರು. ಮೊದಲು ಕಪಟ ರಾಷ್ಟ್ರಪ್ರೇಮ, ನಕಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆಯಂತಹ ಘಟನೆಗಳನ್ನು ಈ ನಾಯಕರು ನಿಲ್ಲಿಸಲಿ. ಅಮಾಯಕರನ್ನು ರಕ್ಷಿಸಲಿ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

► Follow us on –  Facebook / Twitter  / Google+

Facebook Comments

Sri Raghav

Admin