ಮಂಗಳೂರಲ್ಲಿ ಅಮಿತ್ ಷಾ ಗೆ ಅದ್ದೂರಿ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Amith-sha

ಮಂಗಳೂರು, ಆ.21- ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿರುವ ತಿರಂಗ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.  ಗೋವಾದಿಂದ ಸಂಪರ್ಕ ಕ್ರಾಂತಿ ರೈಲಿನ ಮೂಲಕ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದಾಗ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಭಜರಂಗದಳ ಸಂಘ ಪರಿವಾರದ ಮುಖಂಡರು ಅಮಿತ್ ಷಾ ಅವರಿಗೆ ಪುಷ್ಪಮಾಲೆ ಹಾಕಿ ಬರಮಾಡಿಕೊಂಡರು.  ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ನಳಿನ್ಕುಮಾರ್ ಕಟಿಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಿ.ಟಿ.ರವಿ, ಗಣೇಶ್ ಕಾರ್ನಿಕ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಜೆಪಿ ಮುಖಂಡರು ಸೇರಿದಂತೆ ಹಲವು ಗಣ್ಯರು ಅಮಿತ್ ಷಾ ಅವರನ್ನು ಸ್ವಾಗತಿಸಿದರು.
ನಂತರ ಅವರು ಸರ್ಕ್ಯೂಟ್ ಹೌಸ್ಗೆ ತೆರಳಿ ಕೆಲಕಾಲ ವಿಶ್ರಾಂತಿ ಪಡೆದರು. ಬಳಿಕ ಭಾರೀ ಮೆರವಣಿಗೆಯಲ್ಲಿ ಪಂಪ್ವೆಲ್ನಿಂದ ಉಲ್ಲಾಳಕ್ಕೆ ಬಂದ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.  ಪಂಪ್ವೇಲ್ನಿಂದ ಕೊಣಾಜಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದವರೆಗೆ ತಿರಂಗ ಯಾತ್ರೆ ಏರ್ಪಡಿಸಲಾಗಿತ್ತು. ತ್ರಿವರ್ಣ ಧ್ವಜ ಹಿಡಿದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಇದಕ್ಕೂ ಮುನ್ನ ಬೈಕ್ ರ್ಯಾ ಲಿ ನಡೆಸಲಾಯಿತು.  ಹಿಂದ ಸಂಘಟನೆಗೆ ಮುಂದಾಗಿರುವ ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ ವಿರುದ್ಧ ಆಕ್ರೋಶಗೊಂಡಿರುವ ಯಡಿಯೂರಪ್ಪ ಈ ಸಂಬಂಧ ಅಮಿತ್ ಷಾ ಅವರಿಗೆ ಈ ಸಂದರ್ಭದಲ್ಲಿ ದೂರು ನೀಡುವ ಸಾಧ್ಯತೆ ಇದೆ.

ಯಡಿಯೂರಪ್ಪ ಅವರ ವಿರೋಧದ ನಡುವೆಯೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಮೂಲಕ ಪ್ರತ್ಯೇಕವಾಗಿ ಬಲ ಪ್ರದರ್ಶನಕ್ಕೆ ಮುಂದಾಗಿರುವ ಈಶ್ವರಪ್ಪ ಅವರ ಧೋರಣೆ ಬಗ್ಗೆ ರಾಷ್ಟ್ರಾಧ್ಯಕ್ಷರ ಗಮನಕ್ಕೆ ತರುವ ಸಾಧ್ಯತೆ ಇದೆ. ಇತ್ತೀಚೆಗೆ ಗೋರಕ್ಷಣೆ ಹೆಸರಿನಲ್ಲಿ ಪ್ರವೀಣ್ ಪೂಜಾರಿ ಹತ್ಯೆ, ಹಲವರು ದೇಶದ ಹಲವೆಡೆ ದಲಿತರು, ಅಮಾಯಕರ ಮೇಲೆ ನಡೆದ ದೌರ್ಜನ್ಯ ಸೇರಿದಂತೆ ಹಲವು ಘಟನೆಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳವರು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin