ಮಂಗಳೂರಲ್ಲಿ ಎನ್‍ಐಎ ಕಚೇರಿ ಆರಂಭಿಸಲು ಶೋಭಾ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

shobhakarandlaje

ಬೆಂಗಳೂರು, ಜು.11- ಕರಾವಳಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ತಕ್ಷಣವೇ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ಕಚೇರಿಯನ್ನು ಪ್ರಾರಂಭಿಸಬೇಕೆಂದು ಸಂಸದೆ ಶೋಭಾಕರಂದ್ಲಾಜೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಮಂಗಳೂರು, ಉಡುಪಿ, ಕಾರವಾರ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಎನ್‍ಐಎ ಅಗತ್ಯವಿದೆ. ತಕ್ಷಣವೇ ಮಂಗಳೂರಿನಲ್ಲಿ ಒಂದು ಕಚೇರಿಯನ್ನು ಪ್ರಾರಂಭಿಸಬೇಕೆಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ಪ್ರತಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಕರಾವಳಿ ಭಾಗ ಮೊದಲಿನಿಂದಲೂ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಈ ಹಿಂದೆಯೂ ಭಯೋತ್ಪಾದನಾ ಚಟುವಟಿಕೆಗಳು ನಡೆದಿರುವ ಬಗ್ಗೆ ಅನೇಕ ನಿದರ್ಶನಗಳಿವೆ. ಯಾಸಿನ್‍ಭಟ್ಕಳ್ ಬಂಧನ, ಐಸಿಸ್ ಉಗ್ರಗಾಮಿ ಚಟುವಟಿಕೆಗಳಿಗೆ ಕೆಲವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಎನ್‍ಐಎ ಕಚೇರಿ ಆರಂಭವಾದರೆ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವವರನ್ನು ನಿಗ್ರಹಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಡ್ರಗ್ ಮಾಫಿಯಾ:

ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗೆ ಡ್ರಗ್‍ಮಾಫಿಯ ಕಾರಣ ಎಂದು ಅವರು ನೇರವಾಗಿ ಆರೋಪಿಸಿದರು.  ಸಚಿವರಾದ ರಮಾನಾಥರೈ ಈ ಡ್ರಗ್ ಮಾಫಿಯಾಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರ ಜತೆಗೆ ಅವರ ಬೆಂಬಲಿಗರ ಮೂಲಕ ಮರಳು ಮಾಫಿಯಾವನ್ನು ನಡೆಸುತ್ತಿದ್ದಾರೆ. ಹಲವು ಮುಸ್ಲಿಂ ಭಯೋತ್ಪಾದಕರಿಗೆ ನೇರ ಕುಮ್ಮಕ್ಕು ನೀಡುತ್ತಿರುವುದರಿಂದಲೇ ಪದೇ ಪದೇ ಕೋಮುಗಲಭೆ ಸಂಭವಿಸುತ್ತಿದೆ ಎಂದು ಶೋಭಾಕರಂದ್ಲಾಜೆ ಆತಂಕ ವ್ಯಕ್ತಪಡಿಸಿದರು.  ಮಂಗಳೂರಿನ ಸಿಟಿ ಪ್ಲಾಜಾದಲ್ಲಿ ಯುವಕರಿಗೆ ಡ್ರಗ್ ನೀಡುವ ಮೂಲಕ ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ನೀಡಲಾಗುತ್ತದೆ. ಇದರ ಹಿಂದೆ ಯಾರಿದ್ದಾರೆಂಬುದು ಪೊಲೀಸರಿಗೂ ಗೊತ್ತು. ಹಿಂದೂ ಸಂಘಟನೆಗಳ ಮುಖಂಡರನ್ನು ಬಂಧಿಸುವ ನಿಮಗೆ ಮಾಫಿಯಾ ನಡೆಸುವವರನ್ನು ಬಂಧಿಸಲು ತಾಕತ್ತಿಲ್ಲವೇ ಎಂದು ಪೊಲೀಸರನ್ನು ಅವರು ಪ್ರಶ್ನಿಸಿದರು.

ಸಂಪುಟದಿಂದ ಕೈಬಿಡಿ:

ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ಸಚಿವ ರಮಾನಾಥರೈ ಹಾಗೂ ಯು.ಟಿ.ಖಾದರ್ ನೇರ ಕಾರಣ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು, ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಒಂದು ಗುಂಪನ್ನು ಎತ್ತಿಕಟ್ಟಿದ್ದಾರೆ. ತಕ್ಷಣ ಮುಖ್ಯಮಂತ್ರಿಗಳು ಈ ಇಬ್ಬರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ರಮಾನಾಥರೈ ಚುನಾವಣಾ ಭಾಷಣ ಮಾಡುತ್ತಿದ್ದಾರೆ. ನನ್ನನ್ನು ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನೂ ಚುನಾವಣೆಗೆ ಬಂದು ನಿಲ್ಲಿ ಎಂದು ಸವಾಲು ಹಾಕುತ್ತಿದ್ದಾರೆ. ಚುನಾವಣೆಗೆ ಇನ್ನೂ 10 ತಿಂಗಳಿದೆ. ಯಾರು ಎಲ್ಲಿ ನಿಲ್ಲಬೇಕು ಎಂಬುದನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಈಗ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸವಾಗಬೇಕೇ ಹೊರತು ಚುನಾವಣೆ ವಿಷಯ ಬೇಡ ಎಂದರು.

ಮಂಗಳೂರು ನನ್ನ ಹುಟ್ಟೂರು. ನನಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆಯೂ ಹೌದು. ನನ್ನನ್ನು ಇಲ್ಲಿಗೆ ಬರಬೇಡ ಎಂದು ಹೇಳಲು ರಮಾನಾಥ ರೈ ಯಾರು ಎಂದು ಶೋಭಾಕರಂದ್ಲಾಜೆ ತರಾಟೆ ತೆಗೆದುಕೊಂಡರು. ನಾವು ವೋಟ್‍ಬ್ಯಾಂಕ್ ರಾಜಕೀಯ ಮಾಡುತ್ತಿಲ್ಲ. ಇಲ್ಲಿ ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುತ್ತಿಲ್ಲ. ಹಿಂದೂ ಯುವಕರ ರಕ್ಷಣೆ ನಮ್ಮ ಆದ್ಯತೆ ಎಂದು ಹೇಳಿದರು.  ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿದ್ದ ವೇಲೆ ಪೊಲೀಸ್ ಅಧಿಕಾರಿಗಳೊಂದಗೆ ಸಭೆ ನಡೆಸಬೇಕಿತ್ತು. ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಒಬ್ಬ ಹಿಂದೂ ಯುವಕ ಗಲಭೆಯಲ್ಲಿ ಸತ್ತರೆ ಅವರ ತಂದೆ-ತಾಯಿಗಳಿಗೆ ಸಾಂತ್ವನ ಹೇಳುವಷ್ಟು ವ್ಯವಧಾನ ಇಲ್ಲ. ಅದೇ ಮುಸ್ಲಿಂ ಯುವಕ ಸತ್ತಿದ್ದರೆ ಸಾಂತ್ವನಕ್ಕೆ ಹೋಗುತ್ತೀರಾ ಅಲ್ಲವೇ ಎಂದು ಪ್ರಶ್ನಿಸಿದರು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಮಂಗಳೂರಿಗೆ ಹೋಗಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರಿಗೆ ಅಧಿಕಾರ ಕೊಟ್ಟವರು ಯಾರು? ಗೃಹ ಇಲಾಖೆಯಲ್ಲಿ ಕೆಂಪಯ್ಯ ಇದುವರೆಗೂ ಶಾಂತಿ ನೆಲಸಲು ಸಾಧ್ಯವಿಲ್ಲ ಎಂದು ಹಿಂದೆಯೇ ನಾನು ಹೇಳಿದ್ದೆ. ಈಗ ಅದು ನಿಜವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಡಾ.ವಾಮನಾಚಾರ್ಯ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin