ಮಂಚಕ್ಕೆ ಕರೆಯುತ್ತಿದ್ದವನನ್ನು ಮುಗುಸಿ ಮೂಟೆ ಕಟ್ಟಿದ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

 

Bang--Murder-01

ಬೆಂಗಳೂರು, ಸೆ.9-ಅನೈತಿಕ ಸಂಬಂಧಕ್ಕೆ ಪೀಡಿಸುತ್ತಿದ್ದ ಆಂಧ್ರ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ಕಟ್ಟಿ ಬಿಸಾಡಿದ್ದ ದಂಪತಿಯನ್ನು ವೈಟ್‍ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸರು ದೂರು ದಾಖಲಾದ ಒಂದು ಗಂಟೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೂಡಿಯ ನಿವಾಸಿಗಳಾದ ನರಸಿಂಹಲು -ಕಲ್ಯಾಣಿ ಬಂಧಿತ ದಂಪತಿ. ಮೂಲತಃ ಆಂಧ್ರಪ್ರದೇಶದ ನಲ್ಲಮಾಡಮಂಡಲದ ಪೊಲಗಾಂಪಲ್ಲಿ ನಿವಾಸಿಯಾದ ಗುಲಿ ಗೊರ್ಲಾ ಮುನೇಶ್ವರ್ ಎಂಬಾತ ನಿನ್ನೆ ರಾತ್ರಿ 8.45ರಲ್ಲಿ ಪೊಲೀಸ್ ಠಾಣೆಗೆ ಬಂದು ನನ್ನ ತಮ್ಮ ಚಂದ್ರ (35) ಸೆ.6ರಂದು ಸಂಜೆ 5.30ರಲ್ಲಿ ಮನೆಯಿಂದ ಹೊರಗೆ ಹೋದವನು ವಾಪಸ್ ಬಂದಿಲ್ಲ. ಊರಿನ ಕಡೆಯವರು ನಮಗೆ ದೂರವಾಣಿ ಕರೆ ಮಾಡಿ ಬೆಂಗಳೂರಿನ ಹೂಡಿಯಲ್ಲಿ ವಾಸವಿರುವ ನರಸಿಂಹಲು-ಕಲ್ಯಾಣಿ ಎಂಬುವರು ಚಂದ್ರನನ್ನು ಕೊಲೆ ಮಾಡಿ ಮೃತ ದೇಹವನ್ನು ಸಾಗಿಸಿ ಬಚ್ಚಿಟ್ಟಿದ್ದಾರೆ ಎಂದು ತಿಳಿಸಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಿದ್ದು, ಈ ತಂಡ ಘಟನೆ ನಡೆದ ಒಂದು ಗಂಟೆಯೊಳಗೆನರಸಿಂಹಲು-ಕಲ್ಯಾಣಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಯಾಣಿ ಹಾಗೂ ಚಂದ್ರನಿಗೆ ಪರಿಚಯವಿದ್ದು, ಈತ ಕಲ್ಯಾಣಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಗಂಡ ನರಸಿಂಹಲುಗೆ ಗೊತ್ತಾದ ನಂತರ ಚಂದ್ರನಿಂದ ಕಲ್ಯಾಣಿ ದೂರವಾಗಿದ್ದಳು. ಆದರೆ ಚಂದ್ರ ಅನೈತಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದರಿಂದ ಈ ದಂಪತಿ ಸಂಚು ರೂಪಿಸಿ ಸೆ.6ರಂದು ಮಧ್ಯರಾತ್ರಿ 12 ಗಂಟೆಯಲ್ಲಿ ದೊಣ್ಣೆಯಿಂದ ಚಂದ್ರನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಅದನ್ನು ತೆಗೆದುಕೊಂಡು ಹೋಗಿ ಖಾಲಿ ನಿವೇಶನದಲ್ಲಿ ಬಿಸಾಡಿ ವಾಪಸ್ಸಾಗಿದ್ದರು.

ದೂರಿನನ್ವಯ ಪೊಲೀಸರು ದಂಪತಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮರದ ದೊಣ್ಣೆ, ಚಾಕು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರಾಮಚಂದ್ರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ ಒಂದು ಗಂಟೆಯೊಳಗಾಗಿ ಪತ್ತೆ ಹಚ್ಚಿದ್ದು, ಇವರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Facebook Comments

Sri Raghav

Admin