ಮಗಳನ್ನು ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Suicide-Hang-Girl

ಬೆಂಗಳೂರು, ನ.18-ನಾಲ್ಕು ವರ್ಷದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಉತ್ತರ ಪ್ರದೇಶದ ಶೀಲು(28) ಮತ್ತು ಮಗಳು ಅಂಶಿಕಾ(4) ಮೃತಪಟ್ಟವರು. ಬೆಂಗಳೂರಿನಲ್ಲಿ ಪಾನಿಪುರಿ ವ್ಯಾಪಾರ ಮಾಡುವ ಸಂಜಯ್ ಗುಪ್ತ ಎಂಬುವರನ್ನು ವಿವಾಹವಾಗಿದ್ದ ಶೀಲು ಕೆಲ ತಿಂಗಳುಗಳಿಂದ ಮಗಳು ಅಂಶಿಕಾಳೊಂದಿಗೆ ತವರಿನಲ್ಲೇ ಇದ್ದರು. ನಗರದ ಚುಂಚನಕಟ್ಟೆಯ ಯಲ್ಲಮ್ಮದೇವಿ ದೇವಸ್ಥಾನ-ಉಡುಪಿ ಕೆಫೆ ಹೋಟೆಲ್ ಸಮೀಪದಲ್ಲಿ ಸಂಜಯ್ ಗುಪ್ತ ಮನೆ ಮಾಡಿಕೊಂಡು, ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದಾರೆ.

ಇವರ ಪತ್ನಿ ಶೀಲು ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಮಗಳು ಅಂಶಿಕಾಳನ್ನು ಕರೆದುಕೊಂಡು ಉತ್ತರಪ್ರದೇಶದಿಂದ ಗಂಡನ ಮನೆಗೆ ಬಂದಿದ್ದರು. ನಿನ್ನೆ ಸಂಜೆ ಪತಿ ಪಾನಿಪುರಿ ವ್ಯಾಪಾರಕ್ಕೆ ತೆರಳಿದ್ದಾಗ ಮಗಳು ಅಂಶಿಕಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ ಶೀಲು ನಂತರ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 11 ಗಂಟೆಗೆ ವ್ಯಾಪಾರ ಮುಗಿಸಿಕೊಂಡು ಸಂಜಯ್ ಗುಪ್ತ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.  ಸುದ್ದಿ ತಿಳಿದ ಕೋಣನಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಮಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin