ಮಗುವಿನೊಂದಿಗೆ ಬಾವಿಗೆ ಹಾರಿ ಕುಟುಂಬದ ಮೂವರು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

family-sucide

ಮಳವಳ್ಳಿ, ಸೆ.18- ತಮ್ಮ ಏಳು ತಿಂಗಳ ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತೆರಳಿದ ದಂಪತಿ ಅದ್ಯಾವ ಕೆಟ್ಟ ಘಳಿಗೆಯಲ್ಲಿ ಯಾವ ತೀರ್ಮಾನ ಕೈಗೊಂಡರೋ ದೇವರೇ ಬಲ್ಲ. ಆಸ್ಪತ್ರೆಯಿಂದ ಮನೆಗೆ ಬರುವಾಗ ಬೈಕನ್ನು ರಸ್ತೆ ಬದಿ ನಿಲ್ಲಿಸಿ ಮಗುವಿನೊಂದಿಗೆ ಬಾವಿಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿದ ದಂಪತಿಯನ್ನು ದಾಳೀರೇಗೌಡ (30), ಜ್ಯೋತಿ(23) ಎಂದು ಗುರುತಿಸಲಾಗಿದೆ.  ಗುಳ್ಳಘಟ್ಟ ಗ್ರಾಮದ ದಾಳೀರೇಗೌಡ ಎರಡು ವರ್ಷದ ಹಿಂದೆ ದಬ್ಬಳ್ಳಿ ಗ್ರಾಮದ ಜ್ಯೋತಿಯನ್ನು ವಿವಾಹವಾಗಿದ್ದು, ಏಳು ತಿಂಗಳ ಹಿಂದೆಯಷ್ಟೆ ಮುದ್ದಾದ ಹೆಣ್ಣು ಮಗು ಜನಿಸಿತ್ತು. ಬಾಣಂತಿಯಾದ ಜ್ಯೋತಿ ತಾಯಿ ಮನೆಯಲ್ಲೇ ಇದ್ದರು. ನಿನ್ನೆ ಮಗುವಿಗೆ ಹುಷಾರಿಲ್ಲದ ಕಾರಣ ಪತಿ ದಾಳೀರೇಗೌಡ ದಬ್ಬಳ್ಳಿಗೆ ಆಗಮಿಸಿ ಮಗು ಮತ್ತು ಪತ್ನಿಯನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದ.

ಆಸ್ಪತ್ರೆಯಿಂದ ವಾಪಸ್ಸಾಗುವಾಗ ಪತಿ-ಪತ್ನಿ ನಡುವೆ ಅದೇನು ನಡೆಯಿತೋ ಯಾರಿಗೂ ಗೊತ್ತಿಲ್ಲ. ಆದರೆ ಮಾರ್ಗ ಮಧ್ಯೆ ಮಾತ್ರ ಅವರು ಒಂದು ಕೆಟ್ಟ ನಿರ್ಧಾರ ಕೈಗೊಂಡಿದ್ದರು. ಮಳವಳ್ಳಿ ತಾಲೂಕಿನ ಗಾಜನೂರು ಗ್ರಾಮದ ಸಮೀಪ ಬೈಕ್ ನಿಲ್ಲಿಸಿ ಪಕ್ಕದಲ್ಲೇ ಇದ್ದ ಚಿಕ್ಕಣ್ಣ ಎಂಬುವರ ಬಾವಿಗೆ ಮಗುವನ್ನು ಎಸೆದು ತಾವು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಹೋದವರು ರಾತ್ರಿಯಾದರೂ ಬಾರದಿರುವುದರಿಂದ ಗಾಬರಿಯಾದ ಜ್ಯೋತಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಆದರೆ ಇಂದು ಮುಂಜಾನೆ ಗಾಜನೂರು ಸಮೀಪ ಬೈಕ್ ಅನಾಥವಾಗಿ ನಿಂತಿದ್ದನ್ನು ಗಮನಿಸಿ ಪಕ್ಕದಲ್ಲೇ ಇದ್ದ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮೂವರ ಶವಗಳು ಪತ್ತೆಯಾಗಿವೆ. ಮೊದಲು ಜ್ಯೋತಿ ಮತ್ತು ಮಗುವಿನ ಶವ ದೊರೆಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶೋಧ ನಡೆಸಿದಾಗ ದಾಳೀರೇಗೌಡನ ಶವವೂ ದೊರೆತಿದೆ. ಪತಿ-ಪತ್ನಿ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ.

ಆಸ್ಪತ್ರೆಯಿಂದ ವಾಪಸ್ಸಾಗುವಾಗ ಯಾಕೆ ಈ ರೀತಿಯ ನಿರ್ಧಾರ ಕೈಗೊಂಡರೋ ಯಾರಿಗೂ ತಿಳಿದಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಳವಳ್ಳಿ ಗ್ರಾಮಾಂತರ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin