ಮಜ್ಜಿಗೆ, ಪಾನಕಕ್ಕೂ ಟ್ಯಾಕ್ಸ್ ಹಾಕಿರುವುದೇ ಮೋದಿ ಸರ್ಕಾರದ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--02

ಬೆಂಗಳೂರು, ಅ.2- ಮಜ್ಜಿಗೆ, ಪಾನಕಕ್ಕೂ ಟ್ಯಾಕ್ಸ್ ಹಾಕಿರುವುದೇ ಮೋದಿ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟೀಕಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮಜ್ಜಿಗೆ, ಪಾನಕಗಳನ್ನು ಬಹುತೇಕ ಸಂದರ್ಭಗಳಲ್ಲಿ ಉಚಿತವಾಗಿ ನೀಡುತ್ತಿದ್ದೆವು. ಈಗ ಮೋದಿ ಸರ್ಕಾರ ಅದರ ಮೇಲೂ ತೆರಿಗೆ ಏರಿರುವುದು ದುರದೃಷ್ಟಕರ ಎಂದು ಕೇಂದ್ರ ಸರ್ಕಾರದ ತೆರಿಗೆ ನೀತಿಯನ್ನು ವಿರೋಧಿಸಿದರು.

2014ರವರೆಗೆ ದೇಶದ ಆರ್ಥಿಕ ಸ್ಥಿತಿ ಸದೃಢವಾಗಿತ್ತು. ಈಗ ದೇಶದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದೆ. ಬಡವರ ಬದುಕು ದುಸ್ತರವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿ ಕಾರಣ ಎಂದು ಅವರು ಹೇಳಿದರು. ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಚ್ಚಿ ಸಂಭ್ರಮಿಸಿದರೆ. ಅದನ್ನು ಬಿಜೆಪಿಯವರು ಶುಚಿ ಮಾಡಲು ಹೋಗುತ್ತಾರೆ. ಮೊದಲು ಬಿಜೆಪಿಯವರು ತಮ್ಮ ಮನಸ್ಸನ್ನು ಶುಚಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ಅದು ಸಾಧ್ಯವಿಲ್ಲ ಎಂದು ಹೇಳಿದ ಅವರು, 2018ರ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಡವರ ಪರ, ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ರೂಪಿಸಿದೆ. ನಾವು ನಿದ್ದೆ ಮಾಡದಂತೆ ಕೆಲಸ ಮಾಡಬೇಕು. ಟೀಕೆಗಳಿಗೆ, ಆರೋಪಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಹಾಗೆಂದು ಮೌನವಾಗಿರುವುದು ಬೇಡ. ಅದಕ್ಕೆ ತಕ್ಕ ಉತ್ತರವನ್ನೂ ನೀಡಿ ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಪಕ್ಷ 70 ವರ್ಷಗಳಿಂದ ಈ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪದೇ ಪದೇ ಕೇಳುತ್ತಾರೆ. ಮಹಾತ್ಮಗಾಂಧೀಜಿ, ಜವಹರಲಾಲ್ ನೆಹರು, ಅಂಬೇಡ್ಕರ್, ಸರ್ದಾರ್ ವಲಭಬಾಯಿ ಪಟೇಲ್ ಅವರಂಥ ನಾಯಕರನ್ನು ಈ ದೇಶ ನೀಡಿದೆ. ಬಿಜೆಪಿ ಗಾಂಧಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ದೇಶ ಕಟ್ಟುವ ಕೆಲಸದಲ್ಲಿ ತೊಡಗಿದರೆ, ಬಿಜೆಪಿ ಅದನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಪರಂ ಆರೋಪಿಸಿದರು.

ಮಹಾತ್ಮಗಾಂಧೀಜಿಯವರು 21ನೇ ಶತಮಾನಕ್ಕೂ ಪ್ರಸ್ತುತವಾಗಿದ್ದಾರೆ. ಮಾರ್ಟಿನ್‍ಲೂಥರ್ ಅಂತಹವರು ಗಾಂಧೀಜಿಯವರ ಸಿದ್ದಾಂತಗಳನ್ನು ಪ್ರಶಂಸಿಸಿದ್ದಾರೆ. ಗಾಂಧೀಜಿಯವರು ನೈಸರ್ಗಿಕ ಸಂಪನ್ಮೂಲಗಳು ಮುಗಿದು ಹೋಗುತ್ತವೆ. ಅವುಗಳನ್ನು ಜತನದಿಂದ ಕಾಪಾಡಬೇಕು ಎಂದು ಸಂದೇಶ ನೀಡಿದ್ದರು. ಆದರೆ, ಆಧುನಿಕತೆಯ ಬೆನ್ನತ್ತಿ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡುತ್ತಿದ್ದೇವೆ. ಮುಂದಿನ ಐದು ದಶಕಗಳಲ್ಲಿ ನೈಸರ್ಗಿಕ ಸಂಪನ್ಮೂಲ ಕೊರತೆಯಿಂದ ತೀವ್ರ ಆತಂಕ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಸತ್ಯ, ಅಹಿಂಸೆ, ಸರಳತೆಯ ಆದರ್ಶಗಳನ್ನು ಗಾಂಧೀಜಿಯವರು ನಮಗೆ ಉಳಿಸಿ ಹೋಗಿದ್ದಾರೆ. ಇವುಗಳನ್ನು ಅಳವಡಿಸಿಕೊಂಡು ನಾವು ಜೀವನ ನಡೆಸಬೇಕೆಂದು ಅವರು ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಸ್ತ್ರೀ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಇಂದಿಗೂ ಹೋರಾಟ ನಡೆಯುತ್ತಿರುವುದನ್ನು ಗಮನಿಸಿದರೆ ಸಂಪೂರ್ಣ ಸ್ವಾತಂತ್ರ್ಯ ನಮಗೆ ದಕ್ಕಿಲ್ಲ ಎಂದರು. ಗಾಂಧೀಜಿಯವರ ತತ್ವಾದರ್ಶಗಳು ಇಂದಿಗೂ ಜೀವಂತವಾಗಿವೆ. ಅವುಗಳನ್ನು ವ್ಯಾಪಕವಾಗಿ ಪ್ರಚುರಪಡಿಸಬೇಕು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮಾತನಾಡಿ, ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳ ಕೊಂಡಿ ಕಳಚಿ ಹೋಗುತ್ತಿವೆ. ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು. ಬಿ.ಎಲ್.ಶಂಕರ್, ಮೇಯರ್ ಸಂಪತ್‍ರಾಜ್, ಲಕ್ಷ್ಮೀಹೆಬ್ಬಾಳ್ಕರ್, ಶಿವಮೂರ್ತಿ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin