ಮಠ-ಮಂದಿರ ಸ್ವಾಧೀನ : ಮೇಲ್ಮನೆಯಲ್ಲಿ ಬಿಜೆಪಿ, ಜೆಡಿಎಸ್ ಸಭಾತ್ಯಾಗ

ಈ ಸುದ್ದಿಯನ್ನು ಶೇರ್ ಮಾಡಿ

Session---01

ಬೆಂಗಳೂರು,ಫೆ.8-ಮಠ-ಮಂದಿರ ಧಾರ್ಮಿಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸರ್ಕಾರ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಹೊರಡಿಸಿರುವ ಪ್ರಕಟನೆ ಮೇಲ್ಮನೆಯಲ್ಲಿ ಪ್ರತಿಧ್ವನಿಸಿ ಆಡಳಿತ-ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ಸಭಾತ್ಯಾಗ ನಡೆಸಿದ ಪ್ರಸಂಗ ನಡೆಯಿತು.  ಕಲಾಪ ಆರಂಭದಲ್ಲಿ ಮಠಮಾನ್ಯಗಳು, ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರ ಸುಪರ್ದಿಗೆ ಪಡೆಯುವ ಪ್ರಕಟಣೆ ಬಗ್ಗೆ ನಿಲುವಳಿ ಸೂಚನೆ ಪ್ರಸ್ತಾಪದಡಿ ಮಾತನಾಡಿದ ಈಶ್ವರಪ್ಪ , ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಿಂದೂ ಮಠಗಳು ನಮಗೆ ದೇವಾಲಯವಿದ್ದಂತೆ ಅಲ್ಲಿನ ಸ್ವಾಮಿಗಳು ದೇವರಿದ್ದಂತೆ. ಶಿಕ್ಷಣ , ಅನ್ನ ದಾಸೋಹ, ಆರೋಗ್ಯ ಸೇವೆ ನೀಡುತ್ತಿರುವ ಅವರ ಮೇಲೆ ನಿಮ್ಮ ಕಣ್ಣೇಕೆ. ನಿಮ್ಮ ಹಿಂದೂ ವಿರೋಧಿ ಧೋರಣೆ ಖಂಡನೀಯ ಎಂದು ಹರಿಹಾಯ್ದರು.  ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವಸ್ಥಾನ, ಮಠ-ಮಂದಿರಗಳನ್ನು ಸ್ವಾಧೀನಪಡಿಸಿಕೊಳ್ಳುವ ಆಲೋಚನೆ ಸರ್ಕಾರಕ್ಕಿಲ್ಲ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ ಪ್ರಕಟಣೆ ಹೊರಡಿಸಲಾಗಿದೆ. ಅದನ್ನು ವಾಪಸ್ ತೆಗೆದುಕೊಳ್ಳಲು ಸೂಚಿಸಿದ್ದೇವೆ ಎಂದು ಹೇಳಿದರು.

ಮತ್ತೆ ಮಾತನಾಡಿದ ಈಶ್ವರಪ್ಪ , ಸರ್ಕಾರದೀ ಆದೇಶದಿಂದ ಮಠಾಧೀಶರಿಗೆ ಆಘಾತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾಮೀಜಿಗಳಿಗೆ ಆಘಾತವಾಗಿಲ್ಲ. ಬಿಜೆಪಿಯವರಿಗೆ ರಾಜಕೀಯವಾಗಿ ಆಘಾತವಾಗಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಸದಸ್ಯರಾದ ಗಣೇಶ್ ಕಾರ್ನಿಕ್, ಬಿ.ಜೆ.ಪುಟ್ಟಸ್ವಾಮಿ, ರಾಮಚಂದ್ರಗೌಡ, ಕೆ.ಬಿ.ಶಾಣಪ್ಪ ಮುಂತಾದವರು ಸರ್ಕಾರದ ಮೇಲೆ ಮುಗಿಬಿದ್ದು ಈ ಆದೇಶವನ್ನು ವಾಪಸ್ ಪಡೆದರೆ ಸಾಲದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.  ಈಶ್ವರಪ್ಪ ಮಾತನಾಡಿ, ಇಲ್ಲಿ ತೊಘಲಕ್ ದರ್ಬಾರ್ ನಡೆಯುತ್ತಿದ್ದಾರೆ. ಮಠಗಳ ವಿಷಯ ಇಲ್ಲ. ಚರ್ಚೆಗೆ ಬರಬಾರದು ಸರ್ಕಾರದಿಂದ ಅತಾಚುರ್ಯವಾಗಿದೆ. ಸರ್ಕಾರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಐವಾನ್ ಡಿಸೋಜಾ, ಸಚಿವ ಎಂ.ಆರ್.ಸೀತಾರಾಂ ಸೇರಿದಂತೆ ಅನೇಕರು ಮಾತನಾಡಿ, ಸರ್ಕಾರ ಪ್ರಕಟಣೆಯನ್ನು ವಾಪಸ್ ಪಡೆಯಲಿದೆ. ಇದರ ಮೇಲೆ ಚರ್ಚೆಯ ಅಗತ್ಯವೇನಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇದನ್ನು ನಾವು ಮಾಡಿದ್ದಲ್ಲ. ಅವರೇ ನೇಮಿಸಿದ್ದ ರಾಮಜೋಯಿಸ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಪ್ರಕಟಣೆ ಹೊರಡಿಸಿ ಇದನ್ನು ನಾವು ಯಥಾವತ್ತಾಗಿ ಹೊರಡಿಸಿದ್ದೇವೆ. ಅವರು ಮಾಡಿದ್ದರೆ ಹಿಂದೂಪರ ನಾವು ಮಾಡಿದ್ದರೆ ಹಿಂದೂ ವಿರೋಧ. ಇದು ಹೇಗೆ ಎಂದು ಪ್ರಶ್ನಿಸಿದರು.  ಆದರೂ ಇದನ್ನು ಒಪ್ಪದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು.

ಜೆಡಿಎಸ್‍ನಿಂದಲೂ ಸಭಾತ್ಯಾಗ:

ಸರ್ಕಾರ ಈ ಪ್ರಕಟಣೆಯಿಂದ ಮಠಾಧೀಶರಲ್ಲಿ , ಮಠಗಳಲ್ಲಿ ಆತಂಕ ಭಾವನೆ ಉಂಟಾಗಿದೆ. ಸರ್ಕಾರ ಪ್ರಕಟಣೆ ವಾಪಸ್ ಪಡೆದಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಆ ಆತಂಕ ದೂರ ಮಾಡಲು ಅವರಿಗೆ ಬೆಂಬಲಿಸಿ ಸಭಾತ್ಯಾಗ ಮಾಡುತ್ತಿರುವುದಾಗಿ ಜೆಡಿಎಸ್‍ನ ಶ್ರೀಕಂಠೇಗೌಡ ಸದಸ್ಯರೊಂದಿಗೆ ಹೊರ ನಡೆದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin