ಮಣ್ಣಿನ ಗಣೇಶನ ಮಾರಾಟಕ್ಕ ಮಸ್ತ್ ಪ್ಲಾನ್, ನಿಮಗೂ ಸಿಗಬಹುದು ಚಿನ್ನ-ಬೆಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Sadananda--01

ಬೆಂಗಳೂರು, ಆ.20-ಮಣ್ಣಿನ ಗಣಪ ಪ್ರತಿಷ್ಠಾಪಿಸಿ, ಮನೆಯಲ್ಲೇ ವಿಸರ್ಜಿಸಿ, ಬೆಳ್ಳಿ ಅಥವಾ ಚಿನ್ನದ ನಾಣ್ಯ ನಿಮ್ಮದಾಗಿಸಿಕೊಳ್ಳಿ. ಇಂತಹ ಒಂದು ಅಪರೂಪದ ಯೋಜನೆ ಮೂಲಕ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪ್ರೋತ್ಸಾಹಿಸುವ ವಿನೂತನ ಯೋಜನೆಗೆ ಸಮರ್ಪಣಾ ಸೇವಾ ಸಂಸ್ಥೆ ಮುಂದಾಗಿದೆ.
ಮಣ್ಣು ಮತ್ತು ಸಗಣಿಯಿಂದ ತಯಾರಿಸಲಾಗಿರುವ ಪರಿಸರ ಸ್ನೇಹಿ ಗಣಪನ ಮೂರ್ತಿಗಳಲ್ಲಿ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳನ್ನು ಇರಿಸಲಾಗಿದೆ. ಇಂತಹ ಅದೃಷ್ಟ ತರುವ ಗಣಪನ ವಿಗ್ರಹಗಳ ಬೆಲೆಯೂ ಅತ್ಯಂತ ಕಡಿಮೆಯಾಗಿದ್ದು, ಗ್ರಾಹಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಇಂತಹ 10 ಸಾವಿರ ಮೂರ್ತಿಗಳನ್ನು ತಯಾರಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈಗಾಗಲೇ 6 ಸಾವಿರ ಮೂರ್ತಿಗಳನ್ನು ತಯಾರಿಸಲಾಗಿದ್ದು, ಬಹುತೇಕ ಮೂರ್ತಿಗಳನ್ನು ಗ್ರಾಹಕರು ಕಾಯ್ದಿರಿಸಿದ್ದಾರೆ. ಪ್ರತಿ ಮೂರ್ತಿಯಲ್ಲೂ ಬೆಳ್ಳಿ ನಾಣ್ಯಗಳನ್ನು ಇರಿಸಲಾಗಿದ್ದು, ನಾಲ್ಕು ಚಿನ್ನದ ನಾಣ್ಯಗಳನ್ನು ಅಳವಡಿಸಲಾಗಿದೆ. ಅದೃಷ್ಟವಂತ ಗ್ರಾಹಕರಿಗೆ ಮಾತ್ರ ಈ ಚಿನ್ನದ ನಾಣ್ಯ ದೊರಕಲಿದೆ.

ಕೈಗೆಟುಕುವ ಬೆಲೆ :

ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಒಳಗೊಂಡಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಕಡಿಮೆ ಬೆಲೆಗೆ ವಿತರಿಸಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಸಮರ್ಪಣಾ ಸೇವಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಹೊಸಮನಿ. 7 ಇಂಚಿನ ಗಣೇಶ ಮೂರ್ತಿಗೆ 100 ರೂ., 9 ಇಂಚಿಗೆ 180ರೂ., 11 ಇಂಚಿಗೆ 200ರೂ., 14 ಇಂಚಿಗೆ 250 ರೂ. 16 ಇಂಚಿಗೆ 450ರೂ ಹಾಗೂ 19 ಇಂಚಿನ ಮೂರ್ತಿಗೆ 550 ರೂ. ನಿಗದಿಪಡಿಸಲಾಗಿದೆ.  ಕೈಗೆಟುಕುವ ಬೆಲೆಗೆ ಗಣೇಶ ಮೂರ್ತಿ ದೊರೆಯುವುದಲ್ಲದೆ, ಮೂರ್ತಿಯ ಹಣೆ ಭಾಗವನ್ನು ಖಾಲಿ ಬಿಡಲಾಗಿದ್ದು, ಮೂರ್ತಿ ಕೊಂಡೊಯ್ಯುವ ಗ್ರಾಹಕರು ತಮ್ಮ ಧರ್ಮ ಮತ್ತು ಭಕ್ತಿಗನುಸಾರ ನಾಮಗಳನ್ನು ಹಾಕಿಕೊಳ್ಳಬಹುದಾಗಿದೆ.

ಯೋಜನೆಗೆ ಡಿವಿಎಸ್ ಚಾಲನೆ:

ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಗೆ ಇಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಪರಿಸರ ಸಂರಕ್ಷಣೆಯ ಮಾತು ಕೇಳಿ ಬರುತ್ತಿವೆ. ನಮ್ಮ ದೇಶದಲ್ಲೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಕಾಪಾಡಲು ಕರೆ ನೀಡಿದ್ದಾರೆ. ಅವರ ಪ್ರೇರಣೆಯಿಂದಲೇ ಇಂದು ಮಹಾಲಕ್ಷ್ಮಿ ಬಡಾವಣೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪ್ರೋತ್ಸಾಹಿಸಲು ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

ರಾಸಾಯನಿಕ, ಪ್ಲಾಸ್ಟಿಕ್ ಮತ್ತಿತರ ವಿಷಕಾರಕ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಗಣೇಶ ಮೂರ್ತಿ ವಿಸರ್ಜನೆಯಿಂದ ಕೆರೆ, ನದಿ ಮತ್ತಿತರ ಜಲ ಮೂಲಗಳು ಮಾಲಿನ್ಯಗೊಳ್ಳುತ್ತವೆ. ಇಂತಹ ಅಪಾಯಕಾರಿ ಬೆಳವಣಿಗೆಗಳನ್ನು ತಡೆಹಿಡಿಯಬೇಕೆಂಬ ಉದ್ದೇಶದಿಂದ ಸಗಣಿ ಮತ್ತು ಮಣ್ಣಿನಿಂದ ತಯಾರಿಸಲಾಗಿದ್ದು, ಭಕ್ತರು ವಿಗ್ರಹಗಳನ್ನು ತಮ್ಮ ಮನೆಯಲ್ಲೇ ವಿಸರ್ಜನೆ ಮಾಡಿ ತಮ್ಮ ಅದೃಷ್ಟಕ್ಕನುಸಾರ ದೊರೆಯುವ ನಾಣ್ಯಗಳನ್ನು ಮನೆಯಲ್ಲಿಟ್ಟುಕೊಂಡು ಪೂಜಿಸಿಕೊಳ್ಳಬಹುದಾಗಿದೆ.

ಪರಿಸರ ಸ್ನೇಹಿ ಗಣೇಶ ಬಳಕೆಗೆ ಕರೆ:

ನಾಗರಿಕರಲ್ಲಿ ಪರಿಸರ ಸ್ನೇಹಿ ಗಣೇಶ ಬಳಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಸಮರ್ಪಣಾ ಸಂಸ್ಥೆ ಇಂತಹ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದರಿಂದ ಗ್ರಾಹಕರು ಉತ್ತೇಜಿತರಾಗಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಲು ಮುಂದಾಗುವ ಮೂಲಕ ಭವಿಷ್ಯದಲ್ಲಿ ಎದುರಾಗುವ ಪರಿಸರ ಮಾಲಿನ್ಯ ತಪ್ಪಿಸಲು ಸಹಕರಿಸಬೇಕು ಎಂದು ಮಾಜಿ ಉಪಮೇಯರ್ ಎಸ್.ಹರೀಶ್ ಕರೆ ನೀಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin