ಮತದಾನಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಸಿದ್ದರಾಮಯ್ಯ : ಅನಂತ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar

ಬೆಂಗಳೂರು, ಮೇ 6- ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಾರವೇ ಕಾಣುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಟೀಕಿಸಿದ್ದಾರೆ. ಬೊಮ್ಮನಹಳ್ಳಿಯಲ್ಲಿ ನಡೆದ ಭರ್ಜರಿ ರೋಡ್ ಶೋ ವೇಳೆ ಮಾತನಾಡಿದ ಅವರು, ಪ್ರಮುಖ ನಾಯಕರೆಲ್ಲ ತಮ್ಮ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದು, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಾರವೇ ಇಲ್ಲದ ಪರಿಸ್ಥಿತಿ ಇದೆ. ಕೇವಲ ಟ್ವಿಟ್, ಪಾಲಿಟಿಕ್ಸ್ ಮಾಡುವ ಮೂಲಕ ಗೆಲ್ಲುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಬೆಳಗ್ಗೆ ಸಿದ್ದರಾಮಯ್ಯ, ಮಧ್ಯಾಹ್ನ ರಾಹುಲ್, ಸಂಜೆ ರಮ್ಯ ಟ್ವಿಟ್ ಮಾಡುತ್ತಾರೆ. ಅವರು ಪ್ರಚಾರವನ್ನೂ ಸಹ ಟ್ವಿಟ್ಟರ್‍ನಲ್ಲೇ ಮುಗಿಸಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಪ್ರಧಾನಿ ಮೋದಿ, ಅಮಿತ್ ಷಾ, ಬಿಎಸ್‍ವೈ ನೇತೃತ್ವದಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದೆ. 224 ಕ್ಷೇತ್ರಗಳಲ್ಲಿ 500ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಜನಸಂಪರ್ಕ ಮಾಡಿದ್ದೇವೆ. ತಾರಾ ಪ್ರಚಾರಕರ ದಂಡೇ ಬಿಜೆಪಿಯಲ್ಲಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಚಾರ ನಡೆಸಿದ್ದೇವೆ. ದೇಶದ ಜನ ಕಾಂಗ್ರೆಸ್‍ಅನ್ನು 21 ರಾಜ್ಯಗಳಲ್ಲಿ ತಿರಸ್ಕರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.

ಕಾಂಗ್ರೆಸ್‍ಅನ್ನು ತಿರಸ್ಕರಿಸಿರುವ ಜನ ಅಮೇಥಿ ಮತ್ತು ರಾಯ್‍ಭರೇಲಿಯಲ್ಲಿ ಒಬ್ಬ ಶಾಸಕರನ್ನೂ ಗೆಲ್ಲಿಸಿಲ್ಲ. ರಾಹುಲ್‍ಗಾಂಧಿ ಮತ್ತು ಸೋನಿಯಾ ಅವರದ್ದು ಶೂನ್ಯ ಸಾಧನೆ ಎಂದು ಹೇಳಿದರು. ಅಮಿತ್ ಷಾ ಮತ್ತು ಕುಮಾರಸ್ವಾಮಿಯವರ ಭೇಟಿ ಕುರಿತಂತೆ ಕಾಂಗ್ರೆಸ್ ನೀಡಿರುವ ಹೇಳಿಕೆಯನ್ನು ಮೊದಲು ಸಾಬೀತು ಮಾಡಲಿ. ನಿಮಗೆ ಹೆದರಿಕೆ ಇದ್ದರೆ ನಾವು ಆಯೋಜಿಸುವ ಪತ್ರಿಕಾಗೋಷ್ಠಿಯಲ್ಲಿ ಸಾಕ್ಷ್ಯಗಳನ್ನು ಬಿಡುಗಡೆಗೊಳಿಸಿ ಎಂದು ಸವಾಲು ಹಾಕಿದರು. ಇಲ್ಲದಿದ್ದ ಪಕ್ಷದಲ್ಲಿ ಎರಡೂ ಕ್ಷೇತ್ರಗಳ ಚುನಾವಣಾ ಕಣದಿಂದ ಹಿಂದೆ ಸರಿದು ತಮ್ಮ ಸುಳ್ಳನ್ನು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

Facebook Comments

Sri Raghav

Admin