ಮತದಾರರನ್ನು ಸೆಳೆಯಲು ಬಿಜೆಪಿ ಪರಿವರ್ತನಾ ರ‍್ಯಾಲಿಗೆ ಹಿಂದುತ್ವ ಪ್ರತಿಪಾದಿಸುವ ನಾಯಕರಿಗೆ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Hindutva--01

ಬೆಂಗಳೂರು,ಡಿ.11- ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮುಂದಿನ ದಿನಗಳಲ್ಲಿ ಪಕ್ಷದ ಘಟಾನುಘಟಿಗಳನ್ನು ಆಹ್ವಾನಿಸಲು ಮುಂದಾಗಿದೆ.  ಪ್ರಮುಖವಾಗಿ ಹಿಂದುತ್ವ ಪ್ರತಿಪಾದಿಸುವ ನಾಯಕರನ್ನು ಆಹ್ವಾನಿಸುವ ಮೂಲಕ ಮತದಾರರನ್ನು ಪಕ್ಷದತ್ತ ಸೆಳೆಯುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಉಗ್ರ ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರರಾಜೇ ಅರಸ್, ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚವ್ಹಾಣ್, ಹರಿಯಾಣದ ಮನೋಹರ್ ಲಾಲ್ ಕಟ್ಟರ್, ಕೇಂದ್ರ ಸಚಿವರಾದ ಉಮಾಭಾರತಿ, ಸಾದ್ವಿ ನಿರಂಜನ್ ಜ್ಯೋತಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ , ರಾಜನಾಥ್ ಸಿಂಗ್ ಸೇರಿದಂತೆ ಮತ್ತಿತರ ಪ್ರಮುಖರು ರಾಜ್ಯದಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ್ಯಾಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಈ ಹಿಂದೆ ನ.2ರಂದು ನಡೆದ ಉದ್ಘಾಟನಾ ಸಮಾರಂಭ ಜನರಿಲ್ಲದೆ ಬಣಗುಟ್ಟಿದ್ದು , ಪಕ್ಷ ಭಾರೀ ಮುಜುಗರಕ್ಕೀಡಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ ನಿನ್ನೆ ಜೆಪಿನಗರದ ಆರ್‍ಬಿಐ ಲೇಔಟ್‍ನಲ್ಲಿ ನಡೆದ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಇದರಿಂದ ಇನ್ನಷ್ಟು ಪುಳಕಿತರಾಗಿರುವ ಪಕ್ಷದ ಪ್ರಮುಖರು ಮುಂದಿನ ದಿನದ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ.

ಬಿಜೆಪಿ ಪ್ರಾಬಲ್ಯವಿರುವ ಉತ್ತರ ಕರ್ನಾಟಕದ ಗದಗ, ಹಾವೇರಿ, ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ, ದಕ್ಷಿಣ ಕರ್ನಾಟಕದ ಮೈಸೂರು ಮತ್ತಿತರ ಕಡೆ ಬಿಜೆಪಿ ಆಡಳಿತವಿರುವ ಸಿಎಂ ಹಾಗೂ ಕೇಂದ್ರ ಸಚಿವರ ಮೂಲಕ ಪ್ರಚಾರ ನಡೆಸಲು ಪಣ ತೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ರಥಯಾತ್ರೆಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸುವ ಸಂಭವವಿದೆ. 2ನೇ ಆರ್‍ಎಸ್‍ಎಸ್‍ನ ಪ್ರಯೋಗಾಲಯ ಎಂದೇ ಹೇಳಲಾಗುತ್ತಿರುವ ಮುಂಬೈ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಬಿಜೆಪಿ ತನ್ನ ಶಕ್ತಿ ಪ್ರದರ್ಶಿಸಲಿದೆ.

ಇನ್ನು ಬೆಂಗಳೂರಿನಲ್ಲಿ ನಡೆಯಲಿರುವ ರಥಯಾತ್ರೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆಗಮಿಸಿದರೆ, ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ವಸುಂಧರರಾಜೇ ಅರಸ್ ಆಗಮಿಸಲಿದ್ದಾರೆ. ಹಿಂದುಳಿದ ವರ್ಗಗಳ ಮತ ಹೆಚ್ಚಾಗಿರುವ ಬಳ್ಳಾರಿಗೆ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಹಾಗೂ ಹಿಂದೊಮ್ಮೆ ಇದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಹಾಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗೂ ಗಣಿಧಣಿ ಜನಾರ್ಧನ ರೆಡ್ಡಿ ಅವರ ಪಾಲಿಗೆ ಅಮ್ಮ ಎಂದೇ ಖ್ಯಾತಿ ಪಡೆದಿದ್ದ ಸುಷ್ಮಾ ಸ್ವರಾಜ್ ಆಗಮಿಸಲಿದ್ದಾರೆ.

ಬಹುತೇಕ ಕೇಂದ್ರ ನಾಯಕರನ್ನು ಕರೆತರುವ ಹೊಣೆಗಾರಿಕೆಯನ್ನು ಕೇಂದ್ರ ಸಚಿವ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಲಿಗೆ ನೀಡಲಾಗಿದೆ. ಈ ತಿಂಗಳ ಅಂತ್ಯಕ್ಕೆ ಪರಿವರ್ತನಾ ಯಾತ್ರೆಯ ಪರಿಣಾಮಗಳ ಬಗ್ಗೆ ವೀಕ್ಷಿಸಲು ಕೇಂದ್ರದ ಕೆಲವು ನಾಯಕರು ಆಗಮಿಸಲಿದ್ದಾರೆ. ಮತದಾರರ ನಾಡಿಮಿಡಿತ ಅರಿಯುವ ಪ್ರಯತ್ನ ನಡೆಯಲಿದೆ.

Facebook Comments

Sri Raghav

Admin