ಮತದಾರರಿಗೆ 89 ಕೋಟಿ ರೂ. ಹಂಚಿಕೆ ಹಿನ್ನೆಲೆಯಲ್ಲಿ ಆರ್.ಕೆ.ನಗರ ಉಪಚುನಾವಣೆ ರದ್ದು ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

RK-Nagar-01

ನವದೆಹಲಿ,ಏ.9-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾರ ಸಾವಿನಿಂದ ತೆರವಾಗಿರುವ ಚೆನ್ನೈನ ಪ್ರತಿಷ್ಠಿತ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಭಾರೀ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಚುನಾವಣೆ ರದ್ದುಗೊಳ್ಳುವುದು ಬಹುತೇಕ ಖಚಿತವಾಗಿದೆ.
ಆಡಳಿತಾರೂಢ ಎಐಎಡಿಎಂಕೆಯ ಶಶಿಕಲಾ ಬಣದಿಂದ ಮತದಾರರಿಗೆ 89 ಕೋಟಿ ರೂ.ಗಳನ್ನು ಹಂಚಲಾಗಿದೆ ಎಂಬ ಸಂಗತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ ಬೆನ್ನಲ್ಲೇ ಏ.12ರಂದು ನಡೆಯಬೇಕಿದ್ದ ಆರ್.ಕೆ.ನಗರ ಉಪಚುನಾವಣೆಯನ್ನು ರದ್ದುಗೊಳಿಸುವ ಬಗ್ಗೆ ನಾಳೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಅಧಿಕಾರಿಗಳು ನಾಳೆ ಸಭೆ ಸೇರಿ ರಾಜ್ಯ ಮತ್ತು ಆದಾಯ ತೆರಿಗೆ ಅಧಿಕಾರಿಗಳು ನೀಡಿರುವ ವರದಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.  ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಆದಾಯ ತೆರಿಗೆ ಅಧಿಕಾರಿಗಳು ಶಶಿಕಲಾರ ಪರಮಾಪ್ತ ಮತ್ತು ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್ ಅವರ ಮನೆ, ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಭಾರೀ ಅಕ್ರಮವನ್ನು ಪತ್ತೆ ಮಾಡಿದ್ದರು.

ಆರ್.ಕೆ.ನಗರ ಉಪಚುನಾವಣೆಗಾಗಿ ಎಐಎಡಿಎಂಕೆ ಅಭ್ಯರ್ಥಿ ಟಿ.ಟಿ.ವಿ.ದಿನಕರ್ ಪರವಾಗಿ ಮತ ಚಲಾಯಿಸಲು ಪಕ್ಷದ ಕಾರ್ಯಕರ್ತರ ಮೂಲಕ ತಲಾ ಒಬ್ಬೊಬ್ಬರಿಗೆ 4000 ರೂಗಳಂತೆ 89 ಕೋಟಿ ರೂ.ಗಳನ್ನು ಹಂಚಿರುವುದು ದೃಡಪಟ್ಟಿತ್ತು. ವೋಟಿಗಾಗಿ ನೋಟಿನ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ಷೇತ್ರದ ಉಪಚುನಾವಣೆ ರದ್ದುಗೊಳಿಸುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin