ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ, 13ರಂದು ಮತಎಣಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Voting-1

ಗುಂಡ್ಲುಪೇಟೆ/ನಂಜನಗೂಡು, ಏ.9– ಮುಂಬ ರುವ 2018ರ ವಿಧಾನಸಭೆ ಚುನಾವಣೆಗೆ ಸತ್ವ ಪರೀಕ್ಷೆಯಂತಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಉತ್ತಮ ಮತದಾನವಾಗಿದೆ.  ಸಂಜೆ 5 ಗಂಟೆ ವೇಳೆಗೆ ನಂಜನಗೂಡಲ್ಲಿ ಶೇ.76 ಮತ್ತು ಗುಂಡ್ಲುಪೇಟೆಯಲ್ಲಿ ಶೇ.78 ರಷ್ಟು ಮತದಾನವಾಗಿತ್ತು.   ಯಾವುದೇ ಅಹಿತಕರ ಘಟನೆಗಳು ನಡೆಯದೇ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಅಲ್ಲಲ್ಲಿ ಮಾತಿನ ಚಕಮಕಿ, ಮತಯಂತ್ರಗಳ ದೋಷ ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸುವ ಕಸರತ್ತು, ಹಣ ಹಂಚಿಕೆ, ಮೊಬೈಲ್ ಕರೆನ್ಸಿಗಳ ವಿತರಣೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಆರೋಪ, ಪ್ರತ್ಯಾರೋಪಗಳ ನಡುವೆಯೇ ಚುರುಕಿನ ಮತದಾನ ನಡೆಯಿತು.

ಬೆಳ್ಳಂಬೆಳಗ್ಗೆ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಬೆಳಗ್ಗೆ ತೀವ್ರಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನ ಬಿಸಿಲಿನ ಹಿನ್ನೆಲೆಯಲ್ಲಿ ಕೊಂಚ ಮಂದವಾಗಿತ್ತು. ಮತ್ತೆ ಬಿಸಿಲು ಕಡಿಮೆಯಾಗುತ್ತಿದ್ದಂತೆ ಮತದಾರರು ಹೆಚ್ಚಾಗಿ ಮತಗಟ್ಟೆಗೆ ಬರಲಾರಂಭಿಸಿದರು.
ಬೆಳಗ್ಗೆ 12 ಗಂಟೆ ವೇಳೆಗೆ ನಂಜನಗೂಡಿನಲ್ಲಿ ಮತದಾನದ ಪ್ರಮಾಣ ಶೇ. 15ರಷ್ಟಾದರೆ, ಗುಂಡ್ಲುಪೇಟೆಯಲ್ಲಿ ಶೇ.20ರ ಗಡಿ ದಾಟಿತ್ತು. ಮಧ್ಯಾಹ್ನ 3.30ರ ವೇಳೆಗೆ ಎರಡೂ ಕ್ಷೇತ್ರಗಳಲ್ಲಿ ಶೇ.50ರ ಮತದಾನ ನಡೆದಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಭಾರೀ ಬಂದೋಬಸ್ತ್ ಮಾಡಲಾಗಿತ್ತು.

ನಂಜನಗೂಡು ರಿಪೋರ್ಟ್  :

ಅತೀ ಸೂಕ್ಷ್ಮ ಗ್ರಾಮವಾದ ಬದನಾಳು ಗ್ರಾಮದಲ್ಲಿ ಶಾಂತಿಯುತ ಮತದಾನ ನಡೆಯಿತು. 22 ವರ್ಷಗಳಲ್ಲಿ ನಡೆದಿದ್ದ ಜಾತಿ ಕಲಹ ಹಾಗೂ ಹತ್ಯಾಕಾಂಡದಿಂದ ಸಾಮರಸ್ಯ ಹದಗೆಟ್ಟಿತ್ತು. ಈ ಬಾರಿ ಎರಡೂ ಜಾತಿಯ ಯಜಮಾನರ ಮಧ್ಯಸ್ಥಿಕೆಯಿಂದಾಗಿ ಶಾಂತಿಯುತ ಮತದಾನ ನಡೆದಿದೆ. ಕರಿಹುಂಡಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಯೇ ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಕಳಲೆ ಗ್ರಾಮದ ಲೋಕಶಿಕ್ಷಣ ಕೇಂದ್ರ 119ನೇ ಬೂತ್‍ನಲ್ಲಿ ತಮ್ಮ ಮತ ಚಲಾಯಿಸಿದರು.

ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಈ ಕ್ಷೇತ್ರದಲ್ಲಿ ಮತ ಇಲ್ಲ. ನಂಜನಗೂಡಿನ ಅಶೋಕಪುರಂನಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿ ಟಿಶರ್ಟ್ ತೊಟ್ಟು ಮೊಬೈಲ್ ಕರೆನ್ಸಿ ವೋಚರ್‍ಗಳನ್ನು ಮತದಾರರಿಗೆ ವಿತರಿಸುವ ಮೂಲಕ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಪೊಲೀಸರು ಮಧ್ಯಪ್ರವೇಶಿಸಿ ಮತಗಟ್ಟೆ ಸಮೀಪದಿಂದ ಕಾರ್ಯಕರ್ತರನ್ನು ಹೊರ ಕಳುಹಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಎಎಸ್‍ಪಿ ಕಲಾಕೃಷ್ಣ ಸ್ವಾಮಿ ಭೇಟಿ ನೀಡಿ ಬಂದೋಬಸ್ತ್ ಪರಿಶೀಲನೆ ನಡೆಸಿದ್ದಾರೆ. ಮತಗಟ್ಟೆ ನಂಬರ್ 49ರ ಹಳ್ಳದಕೆರೆಯಲ್ಲಿ ಚುನಾವಣಾ ಸಿಬ್ಬಂದಿ ಎಡಗೈಗೆ ಹಾಕಬೇಕಿದ್ದ ಶಾಹಿಯನ್ನು ಬಲಗೈಗೆ ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕೂಡಲೇ ಮತಗಟ್ಟೆಗೆ ಆಗಮಿಸಿದ ಚುನಾವಣಾಧಿಕಾರಿಗಳು ಅದನ್ನು ಸರಿಪಡಿಸಿದರು. ಹಲವೆಡೆ ಮತ ಯಂತ್ರಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಳಂಬವಾದ ಪ್ರಕರಣಗಳು ಕೇಳಿಬಂದಿವೆ.

ಮತದಾನ ಬಹಿಷ್ಕಾರ:

ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಇಲ್ಲಿನ ಮಹದೇವನಗರ ಮತಗಟ್ಟೆಯಲ್ಲಿ ಜನ ಮತದಾನವನ್ನು ಬಹಿಷ್ಕರಿಸಿದ್ದಾರೆ. ಬಹಳ ದಿನಗಳಿಂದ ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿದ್ದೆವು. ಸ್ಥಳೀಯ ಜನಪ್ರತಿನಿಧಿಗಳು ಸಾಕಷ್ಟು ನಿರ್ಲಕ್ಷ್ಯ ಮಾಡಿದ್ದಾರೆ. ಹಾಗಾಗಿ ನಾವು ಮತದಾನ ಮಾಡುವುದಿಲ್ಲ ಎಂದು ಅವರು ಮತಗಟ್ಟೆಗೆ ಬಂದಿರಲಿಲ್ಲ. ಪಕ್ಷದ ಏಜೆಂಟರ್‍ಗಳು ಮತದಾರರ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದರು.

ಗುಂಡ್ಲುಪೇಟೆ ರಿಪೋರ್ಟ್  :

ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕೂಡ ಅಲ್ಲಲ್ಲಿ ಮತಯಂತ್ರಗಳು ಕೈ ಕೊಟ್ಟಿದ್ದು , ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸುವ ಕಸರತ್ತನ್ನು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ನಡೆಸಿದರು. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಅವರು, ಹಾಲಹಳ್ಳಿಯಲ್ಲಿರುವ ದಿ.ಮಹದೇವಪ್ರಸಾದ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಪುತ್ರ ಗಣೇಶ್ ಅವರೊಂದಿಗೆ ತೆರಳಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಸರತಿಸಾಲಿನಲ್ಲಿ ತಾಲ್ಲೂಕಿನ ಚೌಡಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹುಂಡಿ ಮತ್ತು ಮಡಹಳ್ಳಿ ಮತಗಟ್ಟೆಗಳಲ್ಲಿ ತಾಂತ್ರಿಕ ತೊಂದರೆಗಳಿಂದ ಮತದಾನ ವಿಳಂಬವಾಗಿತ್ತು.

ಮತಗಟ್ಟೆ ಸಂಖ್ಯೆ 105 ಮತ್ತು 106ರಲ್ಲಿ ಮತ ಯಂತ್ರ ಕೈಕೊಟ್ಟಿದ್ದರಿಂದ ಅದನ್ನು ಸರಿಪಡಿಸಲು ಚುನಾವಣಾಧಿಕಾರಿಗಳು ಹರಸಾಹಸಪಟ್ಟರು. ಅದೇ ರೀತಿ ಭೀಮನಮಡು ಗ್ರಾಮದ ಮತ ಯಂತ್ರದಲ್ಲೂ ಕೂಡ ತಾಂತ್ರಿಕ ದೋಷ ಕಂಡುಬಂದಿತು. ಅದಕ್ಕಾಗಿ ಅರ್ಧಗಂಟೆ ಮತದಾನ ವಿಳಂಬವಾಗಿತ್ತು. ಇವುಗಳನ್ನು ಹೊರತುಪಡಿಸಿದರೆ ಎರಡೂ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿಯಾಗಿಲ್ಲ. ಬೇಗೂರಿನ ಬೂತ್ ನಂ.18, 19, 20ರ ಮತಕೇಂದ್ರದ ಬಳಿ ಪ್ರಚಾರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಎರಡು ಗುಂಪುಗಳನ್ನು ಪೊಲೀಸರು ಚದುರಿಸಿದ್ದಾರೆ. ನಂಜನಗೂಡಿನಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳೂ ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಂಡ್ಲುಪೇಟೆಯಲ್ಲಿ ಪಕ್ಷೇತರರು ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏ.13ರಂದು ಫಲಿತಾಂಶ ಹೊರಬೀಳಲಿದೆ.

>  ವೋಟ್ ಹಾಕಿ ಪ್ರಾಣ ಬಿಟ್ಟ ಅಜ್ಜಿ..!
ಗುಂಡ್ಲುಪೇಟೆ,ಏ.9- ಮತದಾನ ಮಾಡಿ ಮನೆಗೆ ಹಿಂದಿರುಗಿದ ವೃದ್ದೆಯೊಬ್ಬರು ಮನೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಹಂಗಳ ಗ್ರಾಮದ ನಿವಾಸಿ ದೇವಮ್ಮ(93) ಮೃತಪಟ್ಟ ವೃದ್ಧೆ.  ಇಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ತಾಲ್ಲೂಕಿನ ಅಂಗಾಳದ ಗ್ರಾಮದ ಮತಗಟ್ಟೆ ಸಂಖ್ಯೆ 166ಕ್ಕೆ ಆಗಮಿಸಿದ ವೃದ್ದೆ ದೇವಮ್ಮ ಮತದಾನ ಮಾಡಿ ಮನೆಗೆ ಹಿಂದಿರುಗಿದ ನಂತರ ಮೃತಪಟ್ಟಿದ್ದಾರೆ.

> ಕಳಲೆ ಕೇಶವಮೂರ್ತಿಯಿಂದ ನೀತಿ ಸಂಹಿತೆ ಉಲ್ಲಂಘನೆ : ಮತದಾನದ ಸಂದರ್ಭದಲ್ಲಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಾಗಿದೆ.   ಇಂದು ಬೆಳಗ್ಗೆ ಕಳಲೆಗ್ರಾಮದ ಪಂಚಾಯ್ತಿ ಲೋಕಶಿಕ್ಷಣ ಕೇಂದ್ರದ ಬೂತ್ ಸಂಖ್ಯೆ 119ರಲ್ಲಿ ಮತ ಚಲಾವಣೆಗೆ ಕೇಶವಮೂರ್ತಿಯವರು ಆಗಮಿಸಿದ್ದರು. ಮತದಾನ ಮಾಡಲು ಮತಗಟ್ಟೆಗೆ ಒಳ ಹೋಗುವಾಗ ತಮ್ಮ ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡಿದ್ದರು.  ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪ ಎದುರಾಗಿದೆ.   ಕಾಂಗ್ರೆಸ್ ಚಿಹ್ನೆ ಇರುವ ಶಾಲು ಹೊದ್ದು ಬಂದು ಕೇಶವಮೂರ್ತಿ ಮತದಾನ ಮಾಡಿರುವ ಬಗ್ಗೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ಅಭ್ಯರ್ಥಿಗಳ ವಿವರ : 

ನಂಜನಗೂಡು ಅಭ್ಯರ್ಥಿಗಳು :
ಕಾಂಗ್ರೆಸ್-ಕಳಲೆ ಕೇಶವಮೂರ್ತಿ
ಬಿಜೆಪಿ-ವಿ.ಶ್ರೀನಿವಾಸ್‍ಪ್ರಸಾದ್

ಗುಂಡ್ಲುಪೇಟೆ ಅಭ್ಯರ್ಥಿಗಳು :

ಕಾಂಗ್ರೆಸ್- ಗೀತಾ ಮಹದೇವಪ್ರಸಾದ್
ಬಿಜೆಪಿ- ನಿರಂಜನ್‍ಕುಮಾರ್

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin