ಮತ್ತೊಂದು ‘ಪೊಲೀಸ್’ ಕೇಸ್ : ಡಿ.ಕೆ.ಸುರೇಶ್ ರಿಂದ ಪಿಎಸ್ಐಗೆ ಅವಮಾನ
ಬೆಂಗಳೂರು, ಆ.26- ಸಾರ್ವಜನಿಕರ ಎದುರು ಸಂಸದ ಡಿ.ಕೆ.ಸುರೇಶ್ ತಮ್ಮನ್ನು ಹೀನಾಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪಿಎಸ್ಐ ಶ್ರೀನಿವಾಸ್ ಅವರು ಎಸ್ಪಿಗೆ ಅಮಿತ್ ಸಿಂಗ್ ಗೆ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಸಂಸದರಾಗಿರುವ ಡಿ.ಕೆ.ಸುರೇಶ್ ತಮ್ಮನ್ನು ಅವಮಾನ ಮಾಡಿದ್ದಾರೆ. ಹೀಗಾಗಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಸ್ಪಿ ಅಮಿತ್ ಸಿಂಗ್ ಅವರಿಗೆ ಪಿಎಸ್ಐ ಶ್ರೀನಿವಾಸ್ ಬರೆದಿರುವ ಎರಡು ಪುಟಗಳ ಪತ್ರ ಈ ಸಂಜೆಗೆ ಲಭ್ಯವಾಗಿದೆ. ಸಂಸದರು ನಿನ್ನೆ ತಮ್ಮ ಸದಾಶಿವನಗರದ ನಿವಾಸದಲ್ಲಿ ಆನೇಕಲ್ ತಾಲ್ಲೂಕು ವ್ಯಾಪ್ತಿಯ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಮತ್ತು ಸಬ್ಇನ್ಸ್ಪೆಕ್ಟರ್ಗಳ ಸಭೆ ಕರೆದಿದ್ದರು. ಸಭೆಯಲ್ಲಿ ಅತ್ತಿಬೆಲೆ ಇನ್ಸ್ಪೆಕ್ಟರ್ ರಾಜೇಶ್, ಆನೇಕಲ್ ಇನ್ಸ್ಪೆಕ್ಟರ್ ಮಾಲತೀಶ್, ಜಿಗಣಿ ಇನ್ಸ್ಪೆಕ್ಟರ್ ಮೋಹನ್ ಹಾಗೂ ಬನ್ನೇರುಘಟ್ಟದ ಸಬ್ಇನ್ಸ್ಪೆಕ್ಟರ್ ಮತ್ತು ನಾನು ಸಭೆಯಲ್ಲಿ ಭಾಗವಹಿಸಿದ್ದೆವು.
ಸಭೆ ಮುಗಿಸಿ ಹೊರ ಬರುವ ಸಂದರ್ಭದಲ್ಲಿ ಸಂಸದರು ತಮ್ಮನ್ನು ಕರೆದು ನಿನ್ನದು ಯಾವ ಠಾಣೆ ಎಂದು ಕೇಳಿದರು. ನಾನು ಅತ್ತಿಬೆಲೆ ಎಂದಾಗ. ಓ ನೀನೇನಾ ವಸೂಲಿ ಗಿರಾಕಿ. ನಿತ್ಯ ಜನರನ್ನು ಹಿಂಸಿಸಿ ವಸೂಲಿ ಮಾಡುತ್ತೀಯಂತೆ ಎಂದು ಸಾರ್ವಜನಿಕವಾಗಿ ಹೀನಾಯವಾಗಿ ನಿಂದಿಸಿದರು. ಇದರಿಂದ ನನ್ನ ಮಾನಸಿಕ ಸ್ಥೈರ್ಯ ಕುಗ್ಗಿಹೋಗಿದ್ದು, ಡಿ.ಕೆ.ಸುರೇಶ್ ವಿರುದ್ಧ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಲು ಹಾಗೂ ಮುಂದಿನ ಕ್ರಮ ತೆಗೆದುಕೊಳ್ಳುವ ಕುರಿತು ತಾವು ನಿರ್ದೇಶನ ನೀಡಬೇಕೆಂದು ಪಿಎಸ್ಐ ಶ್ರೀನಿವಾಸ್ ಜಿಲ್ಲಾವರಿಷ್ಠಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರ ಮೇಲೆ ರಾಜಕಾರಣಿಗಳ ದಬ್ಬಾಳಿಕೆ ಇದೇ ಮೊದಲೇನಲ್ಲ. ಈ ಹಿಂದೆ ಮಾಜಿ ಸಚಿವ ಪರಮೇಶ್ವರ್ ನಾಯಕ್ ಅವರು ಡಿವೈಎಸ್ಪಿ ಅನುಪಮಾಶಣೈ ಅವರಿಗೆ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೇ ರೀತಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಸಂಸದ ಡಿ.ಕೆ.ಸುರೇಶ್ ಕೂಡ ಪಿಎಸ್ಐ ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕಾರ್ಯಕ್ಕೆ ಕೈ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಮುಂದೆ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕಾರ್ಯಕ್ಕೆ ಯಾರೂ ಮುಂದಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದರು. ಆದರೂ ಡಿ.ಕೆ.ಸುರೇಶ್ ಅವರು ತಮಗೆ ಅವಮಾನ ಮಾಡಿದ್ದಾರೆ ಎಂದು ಪಿಎಸ್ಐ ಶ್ರೀನಿವಾಸ್ ಅವರು ಎಸ್ಪಿ ಅಮಿತ್ಸಿಂಗ್ ಅವರಿಗೆ ಬರೆದಿರುವ ಪತ್ರ ಇದೀಗ ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
► Follow us on – Facebook / Twitter / Google+