ಮತ್ತೊಂದು ಮಿನಿ ಸಮರಕ್ಕೆ ರಾಜ್ಯ ಸಜ್ಜು : 3 ಲೋಕಸಭೆ, 3 ವಿಧಾನಸಭೆ, 3 ಮೇಲ್ಮನೆ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

BJP-JDS-Congress-Election
ಬೆಂಗಳೂರು,ಮೇ 21-ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ಮುಗಿದು ಸರ್ಕಾರ ರಚಿಸಲು ಪ್ರಯತ್ನಗಳು ಸಾಗಿರುವ ಬೆನ್ನಲ್ಲೆ ಕರ್ನಾಟಕ ಮತ್ತೊಂದು ಮಿನಿ ಮಹಾಸಮರಕ್ಕೆ ಸಜ್ಜಾಗಲಿದೆ. ಮೂರು ಲೋಕಸಭೆ, ಮೂರು ವಿಧಾನಸಭೆ ಹಾಗೂ ಮೂರು ವಿಧಾನಪರಿಷತ್ ಸ್ಥಾನಗಳಿಗೆ ಸದ್ಯದಲ್ಲೆ ಚುನಾವಣೆ ನಡೆಯಲಿದೆ. ಇದರಲ್ಲಿ ಬೆಂಗಳೂರಿನ ಜಯನಗರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ.

ನಿಯೋಜಿತ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಈಗಾಗಲೇ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್ ಹಠಾತ್ ನಿಧನರಾಗಿದ್ದಾರೆ ಎಂದು ಚುನಾವಣೆಯನ್ನು ಮುಂದೂಡಲಾಗಿತ್ತು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೂವರು ಲೋಕಸಭಾ ಸದಸ್ಯರು ಗೆದ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿವಮೊಗ್ಗ ಲೋಕಸಬಾ ಕ್ಷೇತ್ರದ ಸಂಸದ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ, ಬಳ್ಳಾರಿ ಸಂಸದ ಶ್ರೀರಾಮುಲು ಮೊಳಕಾಲ್ಮೂರು ಹಾಗೂ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಮೇಲುಕೋಟೆಯಿಂದ ಗೆದ್ದಿದ್ದಾರೆ. ಈಗಾಗಲೇ ಯಡಿಯೂರಪ್ಪ ಮತ್ತು ಶ್ರೀರಾಮುಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಪುಟ್ಟರಾಜು ಕೂಡ ರಾಜೀನಾಮೆ ನೀಡಲಿದ್ದಾರೆ. ಇದೇ ರೀತಿ ವಿಧಾನಪರಿಷತ್‍ನಿಂದ ಈ ಬಾರಿ ಮೂವರು ಸದಸ್ಯರು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.

ಬೆಂಗಳೂರಿನ ಗೋವಿಂದರಾಜನಗರದಿಂದ ಮಾಜಿ ಸಚಿವ ವಿ.ಸೋಮಣ್ಣ , ಶಿವಮೊಗ್ಗ ನಗರ ಕ್ಷೇತ್ರದಿಂದ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ವಿಜಾಪುರದಿಂದ ಮೇಲ್ಮನೆ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಗೆದ್ದಿದ್ದಾರೆ. ಈ ಮೂವರು ಸದಸ್ಯರು ಸದ್ಯದಲ್ಲೇ ಮೇಲ್ಮನೆಗೆ ರಾಜೀನಾಮೆ ಸಲ್ಲಿಸುವರು. ಹೀಗೆ ಒಟ್ಟು 9 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು , ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಇದೊಂದು ಅಗ್ನಿಪರೀಕ್ಷೆಯಾಗಲಿದೆ.

Facebook Comments

Sri Raghav

Admin