ಮತ್ತೊಮ್ಮೆ ಕನ್ನಡಿಗರ ಸ್ವಾಭಿಮಾನ ಕೆರಳಿಸಿದ ಗೋವಾ ಸಚಿವ ವಿನೋದ್ ಪಾಲೇಕರ್

ಈ ಸುದ್ದಿಯನ್ನು ಶೇರ್ ಮಾಡಿ

Vinodi-Pa

ಪಣಜಿ, ಜ.16- ಕರ್ನಾಟಕದ ವಿರುದ್ದ ಪದೇ ಪದೇ ವಿವಾದತ್ಮಕ ಹೇಳಿಕೆ ನೀಡುತ್ತಲೇ ಇರುವ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಮತ್ತೇ ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ಹೇಳಿಕೆಯನ್ನು ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಕನ್ನಡಿಗರನ್ನು ಹರಾಮಿಗಳೆಂದು ಕರೆದು ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದ ಪಾಲೇಕರ್ ಇದೀಗ ಮತ್ತೇ ಕರ್ನಾಟಕ ಸರ್ಕಾರ ಪ್ರತ್ಯಕ್ಷ ದರ್ಶಿಗಳಿಗೆ ಹಣ ನೀಡುವ ಮೂಲಕ ನೀರಿನ ರಾಜಕೀಯ ಮಾಡುತ್ತಿದೆ ಎಂದು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಗೋವಾದ ಸಚಿವರ ಹೇಳಿಕೆಗೆ ಮತ್ತೇ ರಾಜ್ಯ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ಕಿಡಿಕಾರಿವೆ. ಪದೇ ಪದೇ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಪಾಲೇಕರ್‍ಗೆ ಮುಖ್ಯಮಂತ್ರಿ ಮನೋಹರ್ ಪರಕ್ಕರ್ ಬುದ್ದಿ ಹೇಳಬೇಕು. ಇಲ್ಲವೇ ಅವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದ್ದಾರೆ.
ನಾನು ಎರಡು ದಿನಗಳ ಹಿಂದೆ ಕರ್ನಾಟಕದ ಕಣಕಂಬಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಸರ್ಕಾರ ಸಾರಾಸಗಟಾಗಿ ಸ್ಥಳೀಯರಿಗೆ ಹಣ ನೀಡಿ ಓಲೈಕೆ ಮಾಡಿಕೊಳ್ಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇದು ನಾಚಿಕೆಗೇಡು ಎಂದು ಹೇಳಿದ್ದಾರೆ.

ಸಚಿವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಕರ್ನಾಟಕ ಸರ್ಕಾರ ನಾವು ಸ್ಥಳೀಯರಿಗೆ ದುಡ್ಡು ಕೊಟ್ಟು ಓಲೈಕೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಮಹದಾಯಿ ನದಿ ನೀರಿನಲ್ಲಿ ರಾಜ್ಯದ ಪಾಲನ್ನು ಕೇಳುತ್ತೇದ್ದೇವೆ. ನ್ಯಾಯ ಬದ್ದವಾಗಿ ಸಿಗಬೇಕಾದ ನೀರನ್ನು ಗೋವಾ ಕೊಡಲು ನೂರಾರು ಕಾರಣಗಳನ್ನು ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದೆ. ಮಹದಾಯಿ ನೀರು ಹಂಚಿಕೆ ವಿವಾದವು ನ್ಯಾಯಾಧೀರಣದಲ್ಲೇ ಬಗೆಹರಿಯುವುದಾದರೆ ನಾವು ಕೂಡಾ ಅದಕ್ಕೆ ಸಿದ್ದರಿದ್ದೇವೆ. ನ್ಯಾಯಾಧೀಕರಣಕ್ಕೆ ನಮ್ಮಿಂದ ಸೂಕ್ತವಾದ ದಾಖಲೆಗಳನ್ನು ನೀಡಲು ಸಿದ್ದರಿದ್ದೇವೆಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರ , ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಹದಾಯಿ ನದಿ ಪಾತ್ರದಲ್ಲಿ ಕಾಮಗಾರಿ ನಡೆಸುತ್ತಿದೆ ಎಂದು ಗೋವಾ ಸರ್ಕಾರ ಆಕ್ಷೇಪಿಸಿತ್ತು.

ಮೂರು ದಿನಗಳ ಹಿಂದೆ ಬೆಳಗಾವಿ ಜಿಲ್ಲೆ ಖಾನಪುರ ತಾಲೂಕಿನ ಕಣಕಂಬಿ ಗಡಿ ಪ್ರದೇಶಕ್ಕೆ ಬಂದಿದ್ದ ಪಾಲೇಕರ್ ಕಾಮಾಗಾರಿ ವೀಕ್ಷಣೆ ಮಾಡಿದ್ದರು.
ಈ ವೇಳೆ ಅವರು ಕನ್ನಡಿಗರನ್ನು ಕುರಿತು ಹೇಳಿದ್ದ ಮಾತು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಸಚಿವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin