ಮತ ಕೇಳಲು ಬಂದ ಸಿ.ಪಿ.ಯೋಗೇಶ್ವರ್’ಗೆ ಬೆವರಿಳಿಸಿದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

Chnnapatna--01

ಚನ್ನಪಟ್ಟಣ, ಮೇ 3- ತಾಲ್ಲೂಕಿನ ಆಧುನಿಕ ಭಗೀರಥ, ನೀರಾವರಿ ಹರಿಕಾರ ಎಂದೆಲ್ಲಾ ತಮ್ಮ ಹಿಂಬಾಲಕರಿಂದ ಬಿರುದು ಬಾವಲಿ ಕೊಡಿಸಿ ಕೊಂಡಿದ್ದ ಶಾಸಕ ಸಿ.ಪಿ.ಯೋಗೇಶ್ವರ್ ಪ್ರಚಾರ ಮಾಡಲು ಮುಂದಾದಾಗ ಪ್ರಚಾರ ಮಾಡದಂತೆ ದಿಗ್ಬಂಧನ ಹಾಕಿದ ಘಟನೆ ತಾಲ್ಲೂಕಿನ ಸಾಮಂದಿಪುರದಲ್ಲಿ ಜರುಗಿದೆ. ಸಾಮಂದಿಪುರದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಲು ಮುಂದಾದಾಗ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು, ಶಾಸಕರನ್ನು ಪ್ರಚಾರ ಮಾಡದಂತೆ ತಡೆ ಹಿಡಿದ ಪರಿಣಾಮ ಕೆಲ ಕಾಲ ಗೊಂದಲದ ವಾತಾವರಣ ಏರ್ಪಟ್ಟಿತು.

ಶಾಸಕ ಯೋಗೇಶ್ವರ್ ಆಗಮಿಸುತ್ತಿದ್ದಂತೆಯೇ ಗ್ರಾಮಸ್ಥರು ನಮ್ಮ ಗ್ರಾಮ ಅಭಿವೃದ್ದಿಯಾಗಿಲ್ಲ. ಕಳೆದ 20 ವರ್ಷದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದೀರಿ. ನಮ್ಮ ಗ್ರಾಮಕ್ಕೆ ಯಾವ ಅಭಿವೃದ್ದಿ ಕೆಲಸವನ್ನು ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಾ ಬಂದಿದ್ದು ಈ ಬಾರಿ ನಮ್ಮ ಗ್ರಾಮದಲ್ಲಿ ಯಾವ ಪ್ರಚಾರವನ್ನು ಮಾಡಲು ಬರಬಾರದೆಂದು ತಡೆಯೊಡ್ಡಿದರು.

ನಮ್ಮ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಕುಸಿದು ಬಿದ್ದಿದೆ. ಅದನ್ನು ಸರಿಪಡಿಸಿ ಎಂದು ಅನೇಕ ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಶಾಲೆಯ ಮಕ್ಕಳು ಊಟ ಮಾಡಿ ಬರಲು ಸುಮಾರು 500 ಮೀಟರ್ ದೂರದವರೆಗೂ ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗಬೇಕಾಗಿದ್ದು ಆ ಸಂದರ್ಭದಲ್ಲಿ ಏನಾದರೂ ಅನಾಹುತವಾದರೆ ಹೊಣೆ ಯಾರು ಎಂದು ಪ್ರಶ್ನಿಸಿದರು. ನಮ್ಮ ಭಾಗದ ರಸ್ತೆಯೆಲ್ಲಾ ಅರಕುಬಟ್ಟೆಯಂತಾಗಿದ್ದು, 970 ಮೀಟರ್ ಪೈಪ್‍ಲೈನ್ ಅಳವಡಿಕೆಗೆ ಮಂಜೂರಾಗಿದ್ದರೂ ಯಾವುದೇ ಪೈಪ್ ಲೈನ್ ಅಳವಡಿಸದೆ ನಿರ್ಲಕ್ಷ್ಯ ವಹಿಸಿದ್ದೀರ ಎಂದು ಕಿಡಿಕಾರಿದರು.

ಆ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಈಗ ಆಗಿದ್ದು ಆಯಿತು. ಈ ಬಾರಿ ನನಗೆ ಮತ ನೀಡಿ. ಮುಂದೆ ನಾನೇ ಶಾಸಕನಾಗಿ, ಸಚಿವನಾಗಿ ಆಯ್ಕೆಯಾಗುತ್ತೇನೆ. ಆಗ ಅಭಿವೃದ್ದಿ ಮಾಡುತ್ತೇನೆಂದು ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತು ಯೋಗೇಶ್ವರ್ ವಾಪಸ್ ಹೊರಟು ಹೋದರು. ಎಸ್‍ಡಿಎಂಸಿ ಅಧ್ಯಕ್ಷ ಮಾದೇಶ್, ಮಧು ಸಾಮಂದಿಪುರ, ಅಂಕೇಗೌಡ, ದಿಲೀಪ್, ಮಹೇಶ್, ನಾಗೇಂದ್ರ, ರವಿ, ಪುಟ್ಟಸ್ವಾಮಿ (ಮಳೂರ) ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Facebook Comments

Sri Raghav

Admin