ಮಧ್ಯರಾತ್ರಿಯೇ ‘ರಾಜಕುಮಾರ’ನನ್ನ ಕಂಡು ಖುಷಿಪಟ್ಟ ಅಭಿಮಾನಿಗಳಿಗೆ ಹೋಳಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Rajakumara--01

ಬೆಂಗಳೂರು, ಮಾ.24- ಪವರ್‍ಸ್ಟಾರ್ ಅಭಿನಯದ ಪುನೀತ್‍ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಜಕುಮಾರ ಭರ್ಜರಿ ಬಿಡುಗಡೆ ಕಂಡಿದೆ. ವೀಕ್ಷಕರ ಒತ್ತಾಯದ ಮೇರೆಗೆ ನಿನ್ನೆ ರಾತ್ರಿಯಿಂದಲೇ ಕೆಲವೆಡೆ ಪ್ರದರ್ಶನ ಕಂಡಿರುವುದು ವಿಶೇಷ. ಮಧ್ಯರಾತ್ರಿಯಿಂದಲೇ ಚಿತ್ರ ಆರಂಭಿಸುವಂತೆ ಪುನೀತ್ ಅಭಿಮಾನಿಗಳು ಪಟ್ಟು ಹಿಡಿದಿದ್ದರಿಂದ ಇಂದು ಬೆಳಗ್ಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ 7 ಗಂಟೆಗೂ ಮೊದಲೇ ಮೊದಲ ಶೋ ಅಭಿಮಾನಿಗಳಿಗಾಗಿ ಪ್ರದರ್ಶಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಚಿತ್ರಮಂದಿರದ ಗೇಟ್ ಮುರಿದು ಅಭಿಮಾನಿಗಳು ಒಳನುಗ್ಗಿದ್ದರಿಂದ ಮಧ್ಯರಾತ್ರಿ 12.30ಕ್ಕೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಇತಿಹಾಸ ಬರೆದಿದೆ.

ಬಹುನಿರೀಕ್ಷೆಯ ಚಿತ್ರವಾಗಿರುವ ರಾಜಕುಮಾರ ಪುನೀತ್ ಅಭಿನಯದ ಚಿತ್ರಗಳಲ್ಲೇ ವಿಶಿಷ್ಟ ಕಥೆ ಒಳಗೊಂಡಿದ್ದು, ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ ಪುನೀತ್‍ನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರಿಸಿದ್ದರು.  ಈ ಹಿನ್ನೆಲೆಯಲ್ಲಿ ಇಂದು ಚಿತ್ರ ಬಿಡುಗಡೆಯಾಗುತ್ತದೆ ಎಂದು ಅರಿತ ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಚಿತ್ರಮಂದಿರದ ಬಳಿ ಜಮಾಯಿಸಿ ಚಿತ್ರ ಪ್ರದರ್ಶನಕ್ಕೂ ಬಿಗಿಪಟ್ಟು ಹಿಡಿದರು.

ಬಳ್ಳಾರಿಯ ಶಿವಗಂಗಾ ಚಿತ್ರಮಂದಿರದಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ರಾತ್ರಿ 12.30ಕ್ಕೆ ಪ್ರದರ್ಶಿಸಿದ ಚಿತ್ರವನ್ನು ವೀಕ್ಷಿಸಿದ ಅಭಿಮಾನಿ ಬಳಗ ಸಂಭ್ರಮದಿಂದ ಕುಣಿದಾಡಿದೆ.ಅಲ್ಲದೆ, ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ.  ಬೆಳ್ಳಂಬೆಳಗ್ಗೆ ನರ್ತಕಿ ಚಿತ್ರಮಂದಿರದ ಬಳಿ ಅಭಿಮಾನಿಗಳು ಪುನೀತ್ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿದ್ದು, ಈ ಚಿತ್ರ ಮಂದಿರದ ಐದೂ ಶೋಗಳ ಟಿಕೆಟ್‍ಗಳು ಸೋಲ್ಡ್‍ಔಟ್ ಆಗಿದೆ.

ಅಭಿಮಾನಿಗಳಿಗೆ ಹೋಳಿಗೆ:

ಪುನೀತ್ ಅಭಿಮಾನಿಗಳಲ್ಲಿ ಯುಗಾದಿಗೂ ಮೊದಲೇ ಹಬ್ಬದ ಸಂಭ್ರಮ ಕಂಡು ಬಂದಿದ್ದು, ಇಂದು ಚಿತ್ರಪ್ರದರ್ಶನದ ದಿನವೇ ಅಖಿಲ ಕರ್ನಾಟಕ ಡಾ.ಶಿವರಾಜ್‍ಕುಮಾರ್ ಅಭಿಮಾನಿ ಸಂಘದಿಂದ ಚಿತ್ರ ವೀಕ್ಷಿಸಿ ಬಂದವರಿಗೆ ಹೋಳಿಗೆ ವಿತರಿಸಲಾಯಿತು. ಈ ಮೂಲಕ ಯುಗಾದಿ ಮುನ್ನವೇ ಹಬ್ಬ ಆಚರಿಸಿದ ಸಂಭ್ರಮದಲ್ಲಿ ಅಭಿಮಾನಿಗಳಿದ್ದಾರೆ.  ಕಳೆದ ಒಂದು ವಾರದ ಹಿಂದೆಯೇ ಆನ್‍ಲೈನ್‍ನಲ್ಲಿ ಪುನೀತ್ ಅಭಿಮಾನಿಗಳು ಅವರ ಹೊಚ್ಚಹೊಸ ಚಿತ್ರದ ಟಿಕೆಟ್‍ಗಳನ್ನು ಖರೀದಿಸಿ ಮೊದಲ ದಿನವೇ ಚಿತ್ರ ವೀಕ್ಷಿಸಲು ಕಾತರದಿಂದಿದ್ದಾರೆ. ಅಲ್ಲದೆ ಇಂದು ಬೆಳಗ್ಗೆಯಿಂದ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ಅಭಿಮಾನಿಗಳು ನಿಂತಿದ್ದರು. ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್‍ಗಾಗಿ ನೂಕು ನುಗ್ಗಲು ನಡೆದಿದೆ. ಚಿತ್ರದುರ್ಗದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಮೊದಲ ದಿನ ಮೊದಲ ಪ್ರದರ್ಶನ ವೀಕ್ಷಿಸಲು ಮುಗಿಬಿದ್ದ ಜನ ನೂಕುನುಗ್ಗಲಿನಲ್ಲೇ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದ್ದಾರೆ.

ಚಿತ್ರ ಆರಂಭಕ್ಕೂ ಮುನ್ನ ಪುನೀತ್ ಅಭಿಮಾನಿಗಳಿಂದ 101 ತೆಂಗಿಕಾಯಿ ಹೊಡೆದು ಕಟೌಟ್‍ಗೆ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಲಾಗಿದೆ. ಹೊಸಪೇಟೆ: ನಗರದ ಬಾಲ ಚಿತ್ರಮಂದಿರ ಮತ್ತು ಹಂಪಿ ರಸ್ತೆಯ ಚಿತ್ರಮಂದಿರಗಳ ಬಳಿ ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿಸಿ ಅಲ್ಲಿ ಹಾಕಲಾಗಿದ್ದ ಇಂಗ್ಲೀಷ್ ಚಿತ್ರದ ವಾಲ್‍ಪೋಸ್ಟರ್‍ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.  ಕೆಲವರು ಚಿತ್ರ ಮಂದಿರದ ಗೇಟ್ ಮುರಿದು ಒಳನುಗ್ಗಲು ಯತ್ನಿಸಿದ್ದರಿಂದ ಪೊಲೀಸರು ಲಾಠಿ ಹಿಡಿದು ನಿಯಂತ್ರಿಸಬೇಕಾಯಿತು.  ಮತ್ತೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸ್ ಪೇದೆಯೊಬ್ಬರ ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin