ಮಧ್ಯ ವಿಯೆಟ್ನಾಂನಲ್ಲಿ ಸಾರಿಕಾ ಚಂಡಮಾರುತದ ಅಬ್ಬರಕ್ಕೆ 50ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Sarika-01

ಹನೋಯಿ, ಅ.18- ಮಧ್ಯ ವಿಯೆಟ್ನಾಂ ಮೇಲೆ ಅಪ್ಪಳಿಸಿದ ಸಾರಿಕಾ ಚಂಡಮಾರುತಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಫಿಲಿಪ್ಪೈನ್ಸ್‍ನಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡು 1,50,000ಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಕ್ವಾಂಗ್ ಬಿನ್ ಪ್ರಾಂತ್ಯವೂ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿದೆ. ಪ್ರಚಂಡ ಗಾಳಿಯೊಂದಿಗೆ ಬಿರುಸಿನ ಮಳೆ ಮತ್ತು ಪ್ರವಾಹದಿಂದ ಇಲ್ಲಿ ಕನಿಷ್ಠ 18 ಮಂದಿ ಮೃತರಾಗಿದ್ದು, ನಾಪತ್ತೆಯಾಗಿರುವ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಪ್ರದೇಶದ ನದಿ ಮತ್ತು ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವಿಪತ್ತು ನಿರ್ವಹಣಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯ ವಿಯೆಟ್ನಾಂನ ಇತರ ಮೂರು ಪ್ರಾಂತ್ಯಗಳಲ್ಲೂ ಸಾವು-ನೋವು ಸಂಭವಿಸಿವೆ. ಅನೇಕರು ಕಣ್ಮರೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಅತಂಕವಿದೆ. ಅಪಾಯದಲ್ಲಿರುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯಕ್ಕೆ ಭಾರೀ ಮಳೆ ಮತ್ತು ಪ್ರವಾಹ ಅಡ್ಡಿಯಾಗಿದೆ.  ಈ ಪ್ರದೇಶಗಳಲ್ಲಿ 90 ಸೆಂ.ಮೀ.(3 ಅಡಿಗಳು) ಪ್ರಮಾಣದಲ್ಲಿ ಅತ್ಯಧಿಕ ಮಳೆಯಾಗಿದ್ದು, 1,25,000 ಮನೆಗಳು ಜಲಾವೃತವಾಗಿವೆ. ಹೆದ್ದಾರಿಗಳು, ಹೊಲ-ಗದ್ದೆಗಳು, ಜಾನುವಾರುಗಳು ನಾಶವಾಗಿವೆ.

ಮನಿಲಾ ವರದಿ : ಸಾರಿಕಾ ಚಂಡಮಾರುತ ಫಿಲಿಪ್ಪೈನ್ಸ್‍ನ ಲುಜೊನ್ ದ್ವೀಪದ ಮೇಲೆ ಅಪ್ಪಳಿಸಿ ಇಬ್ಬರು ಬಲಿಯಾದರು. ಚಂಡಮಾರುತ ಮತ್ತು ಬಿರುಮಳೆಯ ರಭಸಕ್ಕೆ ಅನೇಕ ವಿದ್ಯುತ್ ಕಂಬಗಳು ಮತ್ತು ಕಟ್ಟಡಗಳ ಮೇಲ್ಛಾವಣಿಗಳು ತರಗೆಲೆಗಳಂತೆ ಹಾರಿಹೋಗಿವೆ. ಈ ದ್ವೀಪವೊಂದರಲ್ಲೇ 15,000ಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಗಳಿಗೆ ಪಲಾಯನವಾಗಿದ್ದಾರೆ.
ದ್ವೀಪಪ್ರದೇಶದ ವಿವಿಧೆಡೆ ಮಳೆ, ಪ್ರವಾಹದಿಂದ ಭೂಕುಸಿತ ಸಂಭವಿಸಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. 1,50,000ಕ್ಕೂ ಹೆಚ್ಚು ಮಂದಿ ಚಂಡಮಾರುತದಿಂದ ಸಂತ್ರಸ್ತರಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin