ಮನೆಯವರ ವಿರೋಧದ ನಡುವೆ ಪ್ರೇಮಿಗಳಿಗೆ ವಿವಾಹ ಮಾಡಿಸಿದ ರೈತ ಸಂಘದ ಮುಖಂಡರು

ಈ ಸುದ್ದಿಯನ್ನು ಶೇರ್ ಮಾಡಿ

Marriage-01

ಬೇಲೂರು, ಮೇ 15- ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಇಲ್ಲಿನ ಚನ್ನಕೇಶವ ದೇವಾಲಯದಲ್ಲಿ ರೈತ ಸಂಘದ ಮುಖಂಡರು ಧೈರ್ಯ ತುಂಬಿ ಮದುವೆ ಮಾಡಿಸುವ ಮೂಲಕ ನವ ದಂಪತಿಗಳಿಗೆ ಶುಭ ಕೋರಿದರು. ಸಂತೋಷ್(25), ಭಾನುಪ್ರಿಯ(20) ಇಲ್ಲಿನ ಚನ್ನಕೇಶವ ದೇವಾಲಯದಲ್ಲಿ ಮನೆಯವರ ವಿರೋಧದ ನಡುವೆಯೆ ವಿವಾಹವಾದ ಪ್ರೇಮಿಗಳು.  ಚಿಕ್ಕಮಗಳೂರು ಜಿಲ್ಲೆಯ ಕಳಾಸಪುರ ಸಮೀಪದ ಈಶ್ವರಳ್ಳಿಯವರದಾದ ಈ ಪ್ರೇಮಿಗಳು ಕಳೆದ 7 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇಬ್ಬರು ಅಂತರ್ ಜಾತಿಗೆ ಸೇರಿದವರಾಗಿರುವುದರಿಂದ ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಹುಡುಗಿ ಮನೆಯವರು ಹುಡುಗಿಯನ್ನು ದೂರದೂರಿನ ತಮ್ಮ ಸಂಬಂಧಿಕರೊಬ್ಬರ ಮನೆಗೆ ಕಳುಹಿಸಿ ಯಾರಿಗೂ ತಿಳಿಯದ ಹಾಗೆ ಇಟ್ಟಿದ್ದರು. ಆದರೆ ಹುಡುಗಿ ಭಾನುಪ್ರಿಯ ತಾನಿರುವ ಜಾಗವನ್ನು ತಮ್ಮ ಪ್ರೇಮಿಗೆ ತಿಳಿಸಿ ತಮ್ಮ ಸಂಬಂಧಿಕರ ಮನೆಯಿಂದಲೆ ತಾನು ಪ್ರೀತಿಸಿದ ಹುಡುಗನೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಳು.ಮನೆ ಬಿಟ್ಟು ಬಂದ ಇವರಿಗೆ ಎಲ್ಲಿಗೆ ಹೋಗಬೇಕು ಎಂದು ತಿಳಿಯದೆ ದಕ್ಷಿಣ ಕನ್ನಡ ಜಿಲ್ಲೆ ಕಡೆಗೆ ತೆರಳಿದ್ದಾರೆ. ಅಲ್ಲಿ ಇವರಿಗೆ ಪರಿಚಯವಿದ್ದವರು ರೈತ ಸಂಘದ ಮುಖಂಡರಿಗೆ ಮಾಹಿತಿ ನೀಡಿ ಇವರಿಬ್ಬರನ್ನು ಒಂದು ಗೂಡಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ತಾಲೂಕು ರೈತ ಸಂಘದ ಮುಖಂಡರೆಲ್ಲ ಸೇರಿ ಪ್ರೇಮಿಗಳನ್ನು ಬೇಲೂರಿಗೆ ಕರೆಸಿ ಇಬ್ಬರಿಗೂ ಚನ್ನಕೇಶವ ದೇವಾಲಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ವಿವಾಹ ಮಾಡಿಸಿ ಪ್ರೇಮಿಗಳು ಒಂದಾಗುವಂತೆ ಮಾಡುವ ಮೂಲಕ ಧೈರ್ಯ ತುಂಬಿ ಆಸರೆ ನೀಡಿದ್ದಾರೆ.

ಈ ಬಗ್ಗೆ ಪ್ರೇಮಿಗಳಾದ ಸಂತೋಷ್ ಹಾಗೂ ಭಾನುಪ್ರಿಯ ಮಾತನಾಡಿ, ಕಳೆದ 7 ವರ್ಷದಿಂದ ನಾವಿಬ್ಬರೂ ಪ್ರೀತಿಸುತ್ತಿದ್ದು, ಈಗ ಮನೆಯಿಂದ ಹೊರಬಂದಿದ್ದೇವೆ. ಆದರೆ ಮನೆಯವರ ಬೆದರಿಕೆಯಿಂದ ನಮಗೆ ಜೀವನ ನಡೆಸುವುವುದು ಕಷ್ಟವಾಗಿದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಟ್ಟರೆ ನಾವು ಎಲ್ಲಾದರೂ ನೆಮ್ಮದಿಯಾಗಿ ಜೀವನ ಮಾಡುತ್ತೇವೆ. ಅಲ್ಲದೆ ನಮ್ಮ ನೆರವಿಗೆ ಬಂದ ಬೇಲೂರು ರೈತ ಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ರೈತಸಂಘದ ಗೌರವ ಅಧ್ಯಕ್ಷ ಬಸವೇಗೌಡ, ಕಾರ್ಯದರ್ಶಿ ರಂಗನಾಥ್, ಪದಾಧಿಖಾರಿಗಳಾದ ಧರ್ಮೇಗೌಡ ಇನ್ನಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin