ಮಳೆಯ ಅಭಾವ ಬರಪೀಡಿತ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Baragala

ಬೆಂಗಳೂರು, ಅ.23- ರಾಜ್ಯದಲ್ಲಿ ಮಳೆಯ ಅಭಾವ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.  ಈಗಾಗಲೇ ರಾಜ್ಯ ಸರ್ಕಾರ 110 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಅಕ್ಟೋಬರ್‍ನಲ್ಲೂ ಶೇ.90ರಷ್ಟು ಮಳೆ ಕೊರತೆ ಮುಂದುವರೆದಿದೆ. ಇದರಿಂದ ರಾಜ್ಯದಲ್ಲಿ ಮತ್ತೆ 20 ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ಸಿದ್ಧತೆ ನಡೆಸಲಾಗಿದೆ. ರಾಜ್ಯದ ಬರಪೀಡಿತ ಪ್ರದೇಶಗಳ ಸಂಖ್ಯೆ 130 ತಾಲ್ಲೂಕಿಗಿಂತ ಹೆಚ್ಚಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸೆಪ್ಟೆಂಬರ್‍ವರೆಗಿನ ಮಳೆ, ಬೆಳೆ ಪ್ರಮಾಣ ಆಧರಿಸಿ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗಿತ್ತು. ಅಕ್ಟೋಬರ್‍ನಲ್ಲಿ ಅಲ್ಲಲ್ಲಿ ಚದುರಿದಂತೆ ಒಂದೆರಡು ದಿನ ಮಳೆ ಬಂದು ರೈತರಲ್ಲಿ ಆಶಾ ಭಾವನೆ ಮೂಡಿಸಿತ್ತು. ಆದರೆ, ಆಗಸ್ಟ್, ಸೆಪ್ಟೆಂಬರ್‍ನಂತೆ ಅಕ್ಟೋಬರ್‍ನಲ್ಲೂ ಮಳೆಯ ಕಣ್ಣಾ ಮುಚ್ಚಾಲೆ ಆಟ ಮುಂದುವರೆದಿದೆ. ಇದರ ಪರಿಣಾಮ ಬೆಳೆಗಳು ಒಣಗುತ್ತಿವೆ. [ ಇದನ್ನೂ ಓದಿ :  42 ಬರಪೀಡಿತ ತಾಲೂಕುಗಳ ಘೋಷಣೆ ]

ಅಕ್ಟೋಬರ್‍ವರೆಗಿನ ಮಳೆ ಕೊರತೆ, ತೇವಾಂಶ ಹಾಗೂ ಬೆಳೆ ಹಾನಿ ಆಧಾರದ ಮೇಲೆ ಮತ್ತೆ ಬರಪೀಡಿತ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಸರ್ಕಾರ ಮತ್ತೊಂದು ಸುತ್ತಿನ ಬರಪೀಡಿತ ಪ್ರದೇಶಗಳ ಪಟ್ಟಿ ಘೋಷಣೆ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಮಳೆ ಇಲ್ಲ:

ಈಶಾನ್ಯ ಹಿಂಗಾರು ಮಳೆ ಇನ್ನೂ ಆರಂಭವಾಗದಿರುವುದಿಂದ ಸದ್ಯಕ್ಕೆ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಂಗಾರು ಮಳೆ ವಾಪಸ್ಸು ಮರಳಬೇಕಿತ್ತು. ಆದರೆ, ಈ ಬಾರಿ ಮುಂಗಾರು ಮರಳುವಿಕೆಯು ವಿಳಂಬವಾಗಿದೆ. ಇದರಿಂದ ಹಿಂಗಾರು ಮಳೆ ಆರಂಭದಲ್ಲೂ ವಿಳಂಬವಾಗುತ್ತಿದೆ. ದೀಪಾವಳಿ ಹಬ್ಬದ ವೇಳೆಗೆ ಹಿಂಗಾರು ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದರು.
ಬಂಗಾಳ ಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದಿಂದ ವಾತಾವರಣದಲ್ಲಿ ವ್ಯತ್ಯಾಸವಾಗಿ ಮುಂಗಾರು-ಹಿಂಗಾರು ಮಳೆಯಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂದು ಅವರು ಹೇಳಿದರು. [ ಇದನ್ನೂ ಓದಿ :  ರಾಜ್ಯದಲ್ಲಿ ಈ ಬಾರಿಯೂ ಬರಗಾಲದ ಛಾಯೆ ]

ಇನ್ನೂ ನವೆಂಬರ್‍ನಲ್ಲಿ ಮಳೆಯಾಗಬೇಕಾದರೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಚಂಡ ಮಾರುತಗಳು ಉಂಟಾಗಬೇಕು. ಅದರಲ್ಲೂ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿದ್ದರೆ ಮಳೆ ನಿರೀಕ್ಷಿಸಬಹುದು. ಇಲ್ಲದಿದ್ದರೆ ಆಗಲೂ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದರು. ರಾಜ್ಯ ಭೀಕರ ಬರಕ್ಕೆ ತುತ್ತಾಗಿರುವುದರಿಂದ ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಈಗಿಂದಲೇ ಆದ್ಯತೆ ನೀಡಿ ಬರದ ಸಮಸ್ಯೆಪರಿಹಾರಕ್ಕೆ ಕ್ರಮಕೈಗೊಳ್ಳುವುದು ಸೂಕ್ತ.

► Follow us on –  Facebook / Twitter  / Google+

Facebook Comments

Sri Raghav

Admin