ಮಳೆರಾಯನ ರೌದ್ರಾವತಾರಕ್ಕೆ ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ 8 ಮಂದಿ ಬಲಿ
ವಿಜಯವಾಡ, ಸೆ.23-ಆಂಧ್ರಪ್ರದೇಶದ ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರಕ್ಕೆ ಕನಿಷ್ಟ ಎಂಟು ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಆಂಧ್ರದ ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ ಮೊನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ಚಿಲಕಲುರಿಪೇಟ್ ಬಳಿ ಕುಪ್ಪಗಂಜಿ ಉಪನದಿಯಲ್ಲಿ ಮೂರು ಮಂದಿ ಕೊಚ್ಚಿ ಹೋಗಿದ್ದಾರೆ. ಮತ್ತೊಬ್ಬನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಪಿಡುಗುರಲ್ಲ ಬಳಿ ಬ್ರಹ್ಮನಪಲ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, ಮಳೆ-ಗಾಳಿಯ ರಭಸಕ್ಕೆ ಮರವೊಂದು ಉರುಳಿ ಬಿದ್ದು ಇನ್ನೊಬ್ಬ ಸಾವಿಗೀಡಾಗಿದ್ದಾನೆ. ಮಳೆಯಿಂದಾಗಿ ಈ ಎರಡೂ ಜಿಲ್ಲೆಗಳ ವಿವಿಧೆಡೆ ಇನ್ನೂ ನಾಲ್ಕು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ.
ವಿಪತ್ತು ನಿರ್ವಹಣೆ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಎನ್. ಚಿನ ರಾಜಪ್ಪ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮಳೆಯಿಂದಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಹೈದರಾಬಾದ್ನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದರೆ, ಗಂಟೂರು ಜಿಲ್ಲೆಯ ಬಹುಭಾಗಗಳು ದ್ವೀಪಗಳಂತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂದಿನ ಕೆಲವು ದಿನಗಳ ಕಾಲ ಈ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿ ನಿಭಾಯಿಸಲು ಕಟ್ಟೆಚ್ಚರ ವಹಿಸಲಾಗಿದೆ. ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಂಬೈ ವರದಿ :
ಮುಂಬೈನಲ್ಲೂ ಭಾರೀ ಮಳೆಯಿಂದಾಗಿ ಜಲಪ್ರಳಯ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾವು-ನೋವಿನ ವರದಿಯಾಗಿಲ್ಲ. ಕಳೆದ 48 ಗಂಟೆಗಳಲ್ಲಿ ವಾಣಿಜ್ಯ ನಗರಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬೈ ಮಹಾನಗರಿಗೆ ನೀರು ಪೂರೈಸುವ ಎಲ್ಲ ಜಲಾಶಯಗಳು ಭರ್ತಿಯಾಗಿವೆ.
ಪಂಬಾಜ್ ಮತ್ತು ಹರ್ಯಾಣ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲೂ ಮಳೆಯ ಆರ್ಭಟದ ಅವಾಂತರ ಮುಂದುವರೆದಿದ್ದು, ಸಾಮಾನ್ಯ ಜನ ಜೀವನಕ್ಕೆ ಅಡಚಣೆಯಾಗಿದೆ.
–