ಮಳೆ ಕೊರತೆಯಿದ್ದರೂ ರೈತರು, ವಿದ್ಯಾರ್ಥಿಗಳು, ಉದ್ಯಮಿಗಳಿಗೆ ವಿದ್ಯುತ್ ಕೊರತೆಯಾಗಲ್ಲ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--014

ಬೆಂಗಳೂರು, ಜು.12-ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆಯಲ್ಲಿ ಹಿನ್ನಡೆಯಾಗಿ ವಿದ್ಯುತ್ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದರೂ ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬ್ರಿಟಿಷ್ ಡೆಪ್ಯೂಟಿ ಹೈಕಮೀಷನರ್ ಡಾಮಿನಿಕ್ ಮ್ಯಾಕ್ ಅಲಿಸ್ಟರ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯದ ವಿದ್ಯುತ್ ಬೇಡಿಕೆ ಪ್ರಮಾಣ 8300 ಮೆಗಾ ವ್ಯಾಟ್‍ನಿಂದ 9300 ಮೆಗಾ ವ್ಯಾಟ್‍ವರೆಗೂ ಇದೆ. ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವ ಹಾಗೂ ಮುಂದಿನ ದಿನಗಳಲ್ಲಿ ಉಂಟಾಗುವ ವಿದ್ಯುತ್ ಕೊರತೆ ನೀಗಿಸುವ ಬಗ್ಗೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ರಾಜ್ಯದಲ್ಲಿನ ವಿದ್ಯುತ್ ಉತ್ಪಾದನೆ, ವಿದ್ಯುತ್ ಬೇಡಿಕೆ, ವಿದ್ಯುತ್ ಅಭಾವ ಮೊದಲಾದ ವಾಸ್ತವ ಸಂಗತಿಗಳ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮಳೆ ಕೊರತೆಯಿಂದಾಗಿ ಜಲ ವಿದ್ಯುತ್ ಉತ್ಪಾದಿಸುವ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಪ್ರಮಾಣ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಇದೆ. ಆದರೂ ಯಾರಿಗೂ ತೊಂದರೆಯಾಗದಂತೆ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳಲಾಗುವುದು. ಛತ್ತೀಸ್‍ಗಡದಲ್ಲಿನ ನಮ್ಮ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಲ್ಲಿದ್ದಲು ನಿಕ್ಷೇಪವನ್ನು ಶೀಘ್ರದಲ್ಲೇ ಹಂಚಿಕೆ ಮಾಡುವುದಾಗಿ ಕೇಂದ್ರ ಇಂಧನ ಸಚಿವ ಗೋಯಲ್ ಅವರು ಭರವಸೆ ನೀಡಿದ್ದಾರೆ. ಅಲ್ಲಿಂದ ನಮ್ಮ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ತರಲು ಅವಕಾಶ ಮಾಡಿಕೊಡುವುದಾಗಿ ಸಮ್ಮತಿಸಿದ್ದಾರೆ ಎಂದು ಹೇಳಿದರು.

ಎಲ್‍ಇಡಿ ಬಲ್ಬ್ ನಿಲ್ಲಿಸಿದ ಕೇಂದ್ರ:

ರಾಜ್ಯಕ್ಕೆ ಸರಬರಾಜಾಗುತ್ತಿದ್ದ ಎಲ್‍ಇಡಿ ಬಲ್ಬ್‍ಗಳನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಎಲ್‍ಇಡಿ ಬಲ್ಬ್ ಪೂರೈಕೆ ನಿಲ್ಲಿಸಿರುವುದಾಗಿ ಕೇಂದ್ರ ಸರ್ಕಾರವೇ ಲಿಖಿತ ಪತ್ರವನ್ನು ರಾಜ್ಯಕ್ಕೆ ನೀಡಿದೆ. ಇದರಿಂದ ರಾಜ್ಯದಲ್ಲಿ ರಿಯಾಯ್ತಿ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದ್ದ ಎಲ್‍ಇಡಿ ಬಲ್ಬ್ ವಿತರಣೆಯನ್ನು ನಿಲ್ಲಿಸಲಾಗಿದ್ದು, ಕೇಂದ್ರಸರ್ಕಾರ ಪೂರೈಸಿದ ನಂತರ ಪುನಃ ಗ್ರಾಹಕರಿಗೆ ಒದಗಿಸುವುದಾಗಿ ತಿಳಿಸಿದರು.

ಬ್ರಿಟಿಷ್ ಡೆಪ್ಯೂಟಿ ಕಮೀಷನರ್ ಅವರು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಸ್ತಾವನೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ತಂತ್ರಜ್ಞಾನ, ಆರ್ಥಿಕ ನೆರವು ಸೇರಿದಂತೆ ಹಲವು ರೀತಿ ಬೆಂಬಲ ನೀಡಲು ಸಿದ್ದವಿರುವುದಾಗಿ ಹೇಳಿದ್ದಾರೆ. ನಮ್ಮ ರಾಜ್ಯದ ಪವನಶಕ್ತಿ ಹಾಗೂ ಸೌರಶಕ್ತಿ ವಿದ್ಯುತ್ ಉತ್ಪಾದನೆ ಬಗ್ಗೆ ಉತ್ತಮ ಕೆಲಸವಾಗುತ್ತಿದೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಹಸಿರು ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ಹಸಿರು ನಿಧಿ, ಮಸಾಲ ನಿಧಿಗಳಿದ್ದು, ಅವುಗಳ ಮೂಲಕ ರಾಜ್ಯಸರ್ಕಾರದ ಮೂಲಕ ನೇರವಾಗಿ ಹಣಕಾಸು ನೆರವು ನೀಡಲು ಅವಕಾಶವಿದೆ. ಅದನ್ನು ನೀವು ಬಳಸಿಕೊಳ್ಳಬಹುದೆಂಬ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಾರಂಭಿಸಿದ್ದು, ಬೆಂಗಳೂರು, ಹುಬ್ಬಳಿಗೂ ಅದನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೀರಿ. ಆ ಮೀಟರ್‍ಗಳನ್ನು ಒದಗಿಸಿದ್ದು ನಾವೇ ಎಂದು ತಿಳಿಸಿದ್ದಾರೆ ಎಂದರು. ಛಾವಣಿ ಮೇಲಿನ ವಿದ್ಯುತ್ ಉತ್ಪಾದನೆ ವಿದ್ಯುತ್ ವಾಹನಗಳಿಗೆ ಆದ್ಯತೆ ಸೇರಿದಂತೆ ಹಲವು ಪ್ರಸ್ತಾವನೆ ಮುಂದಿಟ್ಟಿದ್ದು, ಲಿಖಿತ ಪ್ರಸ್ತಾವನೆ ಸಲ್ಲಿಸುವಂತೆ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin