ಮಹದಾಯಿ-ಕಳಸಾ ಬಂಡೂರಿಗಾಗಿ ಕರ್ನಾಟಕ ಬಂದ್ (Live)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25-ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈಲು ತಡೆ, ರಸ್ತೆಯಲ್ಲಿ ಟೈರ್‍ಗಳಿಗೆ ಬೆಂಕಿ, ಕಲ್ಲು ತೂರಾಟ ಸೇರಿದಂತೆ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದೆ.   ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ದಾವಣಗೆರೆ ಸೇರಿದಂತೆ ಮತ್ತಿತರ ಕಡೆ ಬಂದ್‍ಗೆ ನಿರೀಕ್ಷೆಗೂ ಮೀರಿದ ಬೆಂಬಲ ಕಂಡುಬಂದಿತು.

ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಮಧ್ಯ ಕರ್ನಾಟಕದ ಶಿವಮೊಗ್ಗ , ಮಡಿಕೇರಿ, ಉತ್ತರ ಕರ್ನಾಟಕದ ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರಗಿ, ಬಾಗಲಕೋಟೆ ಸೇರಿದಂತೆ ಮತ್ತಿತರ ಕಡೆ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕೆಲವು ಭಾಗಗಳಲ್ಲಿ ಎಂದಿನಂತೆ ಜನಜೀವನ ಸಹಜ ಸ್ಥಿತಿಯಲ್ಲಿದ್ದು, ಶಾಲಾ ಕಾಲೇಜುಗಳು, ಅಂಗಡಿ ವಹಿವಾಟುಗಳು, ವಾಣಿಜ್ಯ ಚಟುವಟಿಕೆಗಳು, ಸಾರಿಗೆ ಸಂಚಾರ ಎಂದಿನಂತೆ ಕಂಡುಬಂದಿತು.

 

ಅಭೂತಪೂರ್ವ ಬೆಂಬಲ:

ಕನ್ನಡಿಗರ ಶಕ್ತಿ ಪ್ರದರ್ಶನವೆಂದೇ ಹೇಳಲಾಗಿದ್ದ ಕರ್ನಾಟಕ ಬಂದ್‍ಗೆ ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಳಗಿನಿಂದಲೇ ಬೆಂಗಳೂರಿನಲ್ಲಿ ಬಂದ್ ಬಿಸಿ ತಟ್ಟಿತ್ತು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನುವಂತಿತ್ತು.   ಬಂದ್ ಬಗ್ಗೆ ಮಾಹಿತಿ ತಿಳಿಯದ ಕೆಲವರು ಪರಸ್ಥಳಗಳಿಗೆ ಹೋಗಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಬಸ್‍ಗಳನ್ನು ಬೆಳಗ್ಗೆ 6 ಗಂಟೆಯಿಂದಲೇ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಹಿಡಿಶಾಪ ಹಾಕಿದರು.   ಇತ್ತ ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಬೆಳಗಿನಿಂದಲೇ ಎಲ್ಲೆಡೆ ಖಾಲಿ ಖಾಲಿಯಾದ ದೃಶ್ಯ ಕಂಡುಬಂದಿತ್ತು. ನಗರ ಸಾರಿಗೆ ಸಂಚಾರವನ್ನು ಬೆಳಗಿನಿಂದಲೇ ಸ್ಥಗಿತ ಮಾಡಲಾಗಿತ್ತು. ಪರಿಣಾಮ ಸಾರ್ವಜನಿಕರು ಬಿಎಂಟಿಸಿ ಬಸ್‍ಗಳಿಲ್ಲದೆ ಪರದಾಡುತ್ತಿದ್ದರು.   ಬಂದ್‍ಗೆ ಆಟೋ, ಟ್ಯಾಕ್ಸಿ , ಖಾಸಗಿ ವಾಹನ ಮಾಲೀಕರು, ಲಾರಿ ಮಾಲೀಕರ ಸಂಘ, ಕ್ಯಾಬ್ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದರಿಂದ ಅವುಗಳ ಕೂಡ ಇಂದು ರಸ್ತೆಗಿಳಿಯಲ್ಲಿಲ್ಲ.

> ಶಾಲಾಕಾಲೇಜುಗಳಿಗೆ ರಜಾ:

ಬಂದ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ:

MCS_2151
ಬೆಂಗಳೂರಿನಲ್ಲಿ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲು ತಡೆಯಲು ಯತ್ನಿಸಿದರು.   ಈ ಹಂತದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತಳ್ಳಾಟ-ನೂಕಾಟ ಉಂಟಾಗಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ರೀತಿ ತುಮಕೂರು, ಚಿತ್ರದುರ್ಗ ಮತ್ತಿತರ ಕಡೆಯೂ ರೈಲುಗಳನ್ನು ತಡೆಹಿಡಿಯುವ ಪ್ರಯತ್ನ ಮಾಡಲಾಯಿತು. ಈ ಹಂತದಲ್ಲಿ ಪೊಲೀಸರು 138 ಕಾರ್ಯಕರ್ತರನ್ನು ವಶಕ್ಕೆ ಪಡೆದರು.   ಆನೇಕಲ್‍ನ ಅತ್ತಿಬೆಲೆ ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೋವಾ ಮುಖ್ಯಮಂತ್ರಿ ಮನೋಹರ್‍ಪರಿಕ್ಕರ್ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.  ಬಿಜೆಪಿಯ ಪರಿವರ್ತನಾ ಯಾತ್ರೆ ಹೊರತಾಗಿಯೂ ಬಂದ್‍ಗೆ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ.   ಬಹುತೇಕ ಕಡೆ ಅಂಗಡಿಗಳನ್ನು ಮುಚ್ಚಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಲಾಕಾಲೇಜುಗಳು, ಖಾಸಗಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

Hubli--02

> ಉತ್ತರ ಕರ್ನಾಟಕದಲ್ಲಿ ಬಂದ್ ಬಿಸಿ:

ಮಹದಾಯಿ ನದಿ ನೀರು ಹಂಚಿಕೆ ವಿವಾದ ಕೇಂದ್ರ ಬಿಂದು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಗಡಿಜಿಲ್ಲೆ ಬೆಳಗಾವಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆ ಬಿಸಿ ತಟ್ಟಿತ್ತು. ಪೀರಣಾವಾಡಿ ಕ್ರಾಸ್ ಬಳಿ ಕರ್ನಾಟಕದಿಂದ ಗೋವಾಕ್ಕೆ ತರಕಾರಿ, ಹಣ್ಣು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ತಡೆಹಿಡಿಯಲಾಯಿತು. ಇನ್ನು ಬೆಳಗಿನಿಂದಲೇ ಬಂದ್‍ಗೆ ಕನ್ನಡಿಗರು ಭಾರೀ ಬೆಂಬಲ ವ್ಯಕ್ತಪಡಿಸಿದ್ದರು. ನಗರದಲ್ಲಿ ನಗರ ಸಾರಿಗೆ, ಕೆಎಸ್‍ಆರ್‍ಟಿಸಿ ಬಸ್‍ಗಳಿಲ್ಲದೆ ಕೇಂದ್ರೀಯ ಬಸ್ ನಿಲ್ದಾಣ ಬಣಗುಡುತ್ತಿತ್ತು.   ಹುಬ್ಬಳ್ಳಿಯ ಹೊಸೂರು ಡಿಪೊೀ ಹತ್ತಿರ ಪ್ರತಿಭಟನಾಕಾರರು ಜಮಾಯಿಸಿ ರಸ್ತೆತಡೆ ನಡೆಸಿದರಲ್ಲದೆ ಟೈರ್‍ಗಳಿಗೆ ಬೆಂಕಿ ಹಚ್ಚಿದರು. ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ದೇಸಾಯಿ ವೃತ್ತ ಮತ್ತಿತರ ಕಡೆಯೂ ಪ್ರತಿಭಟನೆ ನಡೆಸಲಾಯಿತು. ಶಾಲಾಕಾಲೇಜು, ಅಂಗಡಿಮುಗ್ಗಟ್ಟು , ಸಿನಿಮಾ ಮಂದಿರಗಳು, ಮಾಲ್‍ಗಳು ಸಹ ಬಂದ್ ಆಗಿದ್ದವು.

Hubli--01

ಹೊಸೂರು ಕ್ರಾಸ್ ಬಳಿ ಪ್ರತಿಭಟನಾನಿರತರು ಚಹಾ ಮಾರಾಟ ಮಾಡುವ ಮೂಲಕ ಅಣುಕು ಪ್ರದರ್ಶನ ಮಾಡಿ, ನರೇಂದ್ರ ಮೋದಿ ಪ್ರತಿಕೃತಿ ಮುಂದೆ ಬಾಯಿ ಬಡಿದುಕೊಂಡು ನೀವು ಹೇಳಿದ್ದೇನು, ಮಾಡಿದ್ದೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇತ್ತ ಗದಗದಲ್ಲೂ ಬಂದ್‍ಗೆ ಬೆಂಬಲ ಕಂಡುಬಂದಿತು. ಧಾರವಾಡದ ಆಲೂರು ವೃತ್ತದಲ್ಲಿ ರೈತರು ಅರೆಬೆತ್ತಲೆ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯಲ್ಲೂ ಕೂಡ ನೂರಾರು ರೈತರು ರಸ್ತೆ ತಡೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.   ಗದಗ ಜಿಲ್ಲೆ ನರಗುಂದದಲ್ಲಿ ಗೋವಾದಿಂದ ಆಗಮಿಸಿದ್ದ ಕಾರೊಂದನ್ನು ಪ್ರತಿಭಟನಾಕಾರರು ಅಟ್ಟಾಡಿಸಿ ಕಲ್ಲೆಸೆದ ಪ್ರಸಂಗವೂ ಜರುಗಿತು. ಕರವೇ ನಾರಾಯಣ ಬಣದ ನೂರಾರು ಕಾರ್ಯಕರ್ತರು ಗದಗ ರೈಲು ನಿಲ್ದಾಣದಲ್ಲಿ ಸೋಲಾಪುರ-ಧಾರವಾಡ ರೈಲು ತಡೆದು ಪ್ರತಿಭಟನೆ ನಡೆಸಿದರು.

> ಮಹದಾಯಿ ನೀರು ಕೇಳುವುದು ಕನ್ನಡಿಗರ ಹಕ್ಕು : ಪ್ರಕಾಶ್‍ರೈ

ಬೆಂಗಳೂರು, ಜ.25- ಮಹದಾಯಿ ನದಿ ನೀರು ಕೇಳುವುದು ಕನ್ನಡಿಗರ ಹಕ್ಕು. ಈ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಬಹುಬಾಷಾ ನಟ ಪ್ರಕಾಶ್‍ರೈ ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು ಮಹದಾಯಿ ನೀರಿನ ಮೇಲೆ ಕನ್ನಡಿಗರ ಹಕ್ಕಿದೆ. ನಮ್ಮ ನೀರನ್ನು ನಾವು ಬಳಸಿಕೊಳ್ಳಬೇಕು. ಎಲ್ಲರೂ ಒಂದೇ ವೇದಿಕೆಯಲ್ಲಿ ನಿಂತು ಹೋರಾಟ ಮಾಡೋಣ ಎಂದು ತಿಳಿಸಿದರು. ಬಂದ್‍ಗೆ ನನ್ನ ಪೂರ್ಣ ಬೆಂಬಲವಿದೆ ಎಂದಿರುವ ಅವರು, ಮೂಲಭೂತ ವಿಚಾರದಲ್ಲಿ ಯಾರೂ ಪಕ್ಷ ರಾಜಕೀಯ ಮಾಡಬಾರದು. ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂದರು.  ಒಮ್ಮೆ ಆಯ್ಕೆಯಾದ ಮೇಲೆ ಅದು ಚುನಾಯಿತ ಸರ್ಕಾರ. ಆಯ್ಕೆಯಾದ ಮೇಲೆ ಅದು ಪಕ್ಷವಾಗಿ ಉಳಿಯುವುದಿಲ್ಲ. ಜನರಿಗಾಗಿ ಶ್ರಮಿಸಬೇಕು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

> ಮೈಸೂರಿನಲ್ಲಿ ಕರ್ನಾಟಕ ಬಂದ್ ಸಂಪೂರ್ಣ ವಿಫಲ
ಮೈಸೂರು, ಜ.25- ಮಹದಾಯಿಗಾಗಿ ಕರೆ ನೀಡಿದ್ದ ಬಂದ್ ಮೈಸೂರಿನಲ್ಲಿ ಸಂಪೂರ್ಣ ವಿಫಲವಾಯಿತು.  ಈ ಬಾರಿ ಬಂದ್‍ನ ವಿಶೇಷವೆಂದರೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವರಿಗೆ ಹಾರ ಹಾಕಿ ಸನ್ಮಾನಿಸಲಾಯಿತು. ಜಯಕರ್ನಾಟಕ ಯುವ ಸಂಘಟನೆಯವರು ನಗರದ ನಂಜು ಮಳಿಗೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿ ಎಂದು ಪ್ರೋತ್ಸಾಹಿಸಿ, ಅಂಗಡಿ ತೆರೆದವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸುತ್ತಿದ್ದುದು ವಿಶೇಷವಾಗಿತ್ತು.

ಬೆಳಗ್ಗೆ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸಿದವು. ಆಗ ಕೆಲ ಕನ್ನಡಪರ ಸಂಘಟನೆಗಳವರು ಸಬರ್ಬ್ ಬಸ್ ನಿಲ್ದಾಣಕ್ಕೆ ತೆರಳಿ ಬಸ್‍ಗಳನ್ನು ತಡೆದರು. ನಂತರ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಈ ವಿಷಯ ತಿಳಿದು ಸಂಸದ ಪ್ರತಾಪ್‍ಸಿಂಹ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಬಸ್ ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ ಇಲ್ಲದೆ ಸಾವಿರಾರು ಪ್ರಯಾಣಿಕರು ಪರದಾಡಿದರು.  ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿಗೆ ಹೋಗಬೇಕಾದ ಬಸ್‍ಗಳನ್ನು ಹೊರಗೆ ಬಿಡಲೇ ಇಲ್ಲ. ಇಡೀ ನಗರದಲ್ಲಿ ಎಲ್ಲ ಅಂಗಡಿಗಳು ತೆರೆದಿದ್ದವು. ವಾಟಾಳ್ ನೇತೃತ್ವದ ಕೆಲ ಬೆಂಬಲಿಗರು ಅಂಗಡಿ ಮುಚ್ಚುವಂತೆ ಒತ್ತಾಯಿಸಿದರು. ಈ ವೇಳೆ ಜಯಕರ್ನಾಟಕ ಸಂಘಟನೆ ಹಾಗೂ ಬಿಜೆಪಿಯವರು ಅಂಗಡಿ ತೆರೆಯುವಂತೆ ಮನವಿ ಮಾಡುತ್ತಿದ್ದುದುರಿಂದ ಅಂಗಡಿಯವರು ಗೊಂದಲಕ್ಕೀಡಾಗಿದ್ದರು.  ಪೆಟ್ರೋಲ್‍ಬಂಕ್ ತೆರೆದಿದ್ದವು. ಚಿತ್ರಮಂದಿರಗಳು ಬಂದ್ ಆಗಿದ್ದವು. ಶಾಲಾ-ಕಾಲೇಜ್ ಮುಚ್ಚಿದ್ದವು. ಉಳಿದಂತೆ ನಗರ ಸಹಜವಾಗಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.

> ಬಂದ್ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಿಎಂ ಸಿದ್ದರಾಮಯ್ಯ ಮನವಿ 
ಬೆಂಗಳೂರು,ಜ. 25- ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಬಂದ್ ವೇಳೆ ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ. ಸಮಾಜದ ಶಾಂತಿಕದಡವುದ ಕೆಲಸ ಮಾಡಿದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ  ಸಿಎಂ ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ್ದಾರೆ.

00000000000000

> ರಾಮನಗರ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ರಾಮನಗರ, ಜ.25- ಮಹದಾಯಿ ನೀರಿನ ಹೋರಾಟಕ್ಕೆ ಕರೆಯಲಾಗಿರುವ ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಮುಂಜಾನೆಯಿಂದಲೇ ಕನ್ನಡ ಪರ ಸಂಘಟನೆಗಳು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು. ಆದರೂ ಬಸ್ ಸಂಚಾರ ಹೊರತುಪಡಿಸಿ ಜಿಲ್ಲೆಯಾದ್ಯಂತ ಜನಜೀವನ ಸಹಜ ಸ್ಥಿತಿಯಲ್ಲಿದೆ. ಕರುನಾಡ ಸೇನೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಜನ ಪರ ವೇದಿಕೆ ಕಾರ್ಯಕರ್ತರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರೆ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನರ ವೇದಿಕೆ ಪದಾಧಿಕಾರಿಗಳು ಮನೋಹರ್ ಪರಿಕ್ಕರ್ ಮತ್ತು ಗೋವಾ ನೀರಾವರಿ ಸಚಿವ ಪಾಲೇಕ್ಕರ್ ಅವರ ಪ್ರತಿಕೃತಿಗಳನ್ನು ಚಟ್ಟದ ಮೇಲೆ ಮಲಗಿಸಿ ಮೆರವಣಿಗೆ ನಡೆಸಿದರು.  ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ರಸ್ತೆ ತಡೆ ನಡೆಸಿದ ಕನ್ನಡ ಪರ ಕಾರ್ಯಕರ್ತರು ಕೇಂದ್ರ ಹಾಗೂ ಗೋವಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಸಂದರ್ಭದಲ್ಲಿ ಶಿವಣ್ಣ ಮತ್ತು ಶಿವಶಂಕರ್ ಎಂಬ ಇಬ್ಬರು ಕಾರ್ಯಕರ್ತರು ಕೇಶ ಮಂಡನ ಮಾಡಿಸಿಕೊಳ್ಳುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದರು.   ಬೆಳಗಾಗುತ್ತಿದ್ದಂತೆ ಬಂದ್ ಯಶಸ್ವಿಯಾಗುವ ಲಕ್ಷಣಗಳು ಕಂಡು ಬಂದರೂ ಸಮಯ ಕಳೆಯುತ್ತಿದ್ದಂತೆ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳುತ್ತಿದ್ದವು. ಸರ್ಕಾರಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಬಸ್ ಸಂಚಾರ ವಿರಳವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಉಳಿದಂತೆ ಆಟೋ, ಪೆಟ್ರೋಲ್ ಬಂಕ್, ಹೊಟೇಲ್‍ಗಳು, ಎಪಿಎಂಸಿ ಮತ್ತು ರೇಷ್ಮೆ ಮಾರುಕಟ್ಟೆಗಳು ಎಂದಿನಂತೆ ವಹಿವಾಟು ನಡೆಸುತ್ತಿದ್ದವು.

000000000000000000000

> ಬಂದ್‍ಗೆ ಕೋಲಾರದಲ್ಲಿ ಮಿಶ್ರ ಪ್ರತಿಕ್ರಿಯೆ
ಕೋಲಾರ, ಜ.25-ಮಹದಾಯಿ ಸಂಬಂಧ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಕೋಲಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಹೋಟೆಲ್, ತಳ್ಳುಗಾಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ತೆರೆದಿದ್ದವು. ಆದರೆ, ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು.  ಎಲ್ಲಿಯೂ ಕೆಎಸ್‍ಆರ್‍ಟಿಸಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ವಿಶೇಷವೆಂದರೆ ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸಲಿಲ್ಲ. ಬದಲಾಗಿ ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು.  ರೈಲ್ವೆ ನಿಲ್ದಾಣ ಮತ್ತಿತರ ಕಡೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು, ಪ್ರತಿಭಟನೆಗಳು ನಡೆಯಲಿಲ್ಲ.
000000000000000000000

> ಕುಣಿಗಲ್‍ನಲ್ಲಿ ಬಂದ್ ವಿಫಲ 
ಕುಣಿಗಲ್,ಜ.25-ಮಹದಾಯಿ ಹೋರಾಟಕ್ಕಾಗಿ ಕರೆದಿದ್ದ ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಯಾವುದೇ ಕನ್ನಡಪರ, ರೈತಪರ ಸಂಘಟನೆಗಳಾಗಲಿ ಬೆಂಬಲ ಸೂಚಿಸಿಲ್ಲ.  ಆದರೆ ಬಂದ್ ಹಿನ್ನೆಲೆಯಲ್ಲಿ ಕೆಲವು ಅಂಗಡಿ ಮುಗ್ಗಟ್ಟು ಬಿಟ್ಟರೆ ಬಸ್ ಸಂಚಾರ ಸ್ಥಗಿತೊಂಡಿದ್ದವು. ಸರ್ಕಾರಿ ಕಚೇರಿಗಳು ತಮ್ಮ ಕಾರ್ಯ ನಿರ್ವಹಿಸಿದವು.  ಎಂದಿನಂತೆ ಹೋಟೆಲ್‍ಗಳು ಕೆಲಸ ನಿರ್ವಹಿಸುತ್ತಿದ್ದು , ಹಾಸನ-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿತ್ತು. ಒಟ್ಟಾರೆ ಕುಣಿಗಲ್‍ನಲ್ಲಿ ಬಂದ್ ಬೆಂಬಲವಿಲ್ಲದೆ ಸಂಪೂರ್ಣ ವಿಫಲಗೊಂಡಿದೆ.

00000000000000000000000000
> ಹುಬ್ಬಳ್ಳಿ-ಧಾರವಾಡ ಸ್ತಬ್ಧ
ಹುಬ್ಬಳ್ಳಿ, ಜ.25- ಮಹದಾಯಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಹುಬ್ಬಳ್ಳಿಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.  ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಕನ್ನಡಪರ ಸಂಘಟನೆಗಳು ಪ್ರತಿಭಟಿಸಿ ಮೆರವಣಿಗೆ, ರ್ಯಾಲಿ ನಡೆಸಿದರಲ್ಲದೆ, ಸಂಸದ ಪ್ರಹ್ಲಾದ್ ಜೋಷಿ ಅವರ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.  ನಗರದ ಲ್ಯಾಮಿಂಗ್‍ಟನ್ ರಸ್ತೆಯಲ್ಲಿರುವ ಅವರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಕೆಲವರು ಬ್ಯಾರಿಕೇಡ್ ತಳ್ಳಿ ಒಳಹೋಗಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದರು. ಇನ್ನು ಕೆಲವು ಸಂಘಟನೆಗಳವರು ಕೇಂದ್ರ ಸರ್ಕಾರಿ ಸೌಮ್ಯದ ಕಚೇರಿಗಳಾದ ಅಂಚೆಕಚೇರಿ, ಬಿಎಸ್‍ಎನ್ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ಮೋದಿ ಅವರು ಮಹದಾಯಿ ವಿಷಯದಲ್ಲಿ ಮಧ್ಯಪ್ರವೇಶಿಸಿ ವಿವಾದವನ್ನು ಕೂಡಲೇ ಇತ್ಯರ್ಥ ಮಾಡಬೇಕೆಂದು ಆಗ್ರಹಿಸಿದರು.
ಜನಸಾಮಾನ್ಯರು ತತ್ತರ:  ಕಳಸ-ಬಂಡೂರಿ-ಮಹದಾಯಿ ಯೋಜನೆಗಾಗಿ ಕರ್ನಾಟಕ ಬಂದ್ ನಡೆದ ಪರಿಣಾಮ ಜನಸಾಮಾನ್ಯರಿಗೆ ಆಟೋ, ಬಸ್ ಸಿಗದೆ ಬಳಲಿದರು. ಬಿಸಿಲಿನ ತಾಪ ತಾಳಲಾರದೆ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಬಿದ್ದ ಘಟನೆ ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ಸಾರ್ವಜನಿಕರು ಅಸ್ವಸ್ಥಗೊಂಡ ವ್ಯಕ್ತಿಯನ್ನು ಉಪಚರಿಸಿ ಆ್ಯಂಬುಲೆನ್ಸ್‍ನಲ್ಲಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದರು.

 > ಬಿ.ಎಂ.ಟಿ.ಸಿ., ಕೆ.ಎಸ್.ಆರ್.ಟಿ.ಸಿ. ಸಂಚಾರ ಸ್ಥಗಿತ : 

ಬೆಳಗಿನ ಜಾವ ಬಿ.ಎಂ.ಟಿ.ಸಿ. ಬಸ್ ಸಂಚಾರ ಎಂದಿನಂತೆ ಆರಂಭವಾಗಿತ್ತಾದರೂ, ಬಂದ್ ಬಿಸಿ ಏರುತ್ತಿದ್ದಂತೆಯೇ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನಿಸುವುದಾಗಿ ಹೇಳಲಾಗಿತ್ತು. ಅದರಂತೆ ಬೆಳಿಗ್ಗೆ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ಮಹದಾಯಿ ಹೋರಾಟಗಾರರು ಮೆಜೆಸ್ಟಿಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರಿಂದ, ಬಿ.ಎಂ.ಟಿ.ಸಿ. ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಹೊರಗಿನಿಂದ ಬಂದ ಜನ ಮತ್ತು ಬೆಂಗಳೂರಿನಿಂದ ವಿವಿಧೆಡೆ ತೆರಳುವವರು ಪರದಾಡುವಂತಾಗಿದೆ. ಬಂದ್ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ ಕಾರಣ, ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಕೆಲವು ಆಟೋ ಸಂಚಾರ ಹೊರತಾಗಿ ಮೆಜೆಸ್ಟಿಕ್ ಏರಿಯಾದಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.

> ಚೆನ್ನೈ ಎಕ್ಸ್ ಪ್ರೆಸ್ ರೈಲು ತಡೆ, ನಾರಾಯಣಗೌಡ ಅರೆಸ್ಟ್ : 

ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ನಾರಾಯಣ ಗೌಡ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅಲ್ಲಿಂದ ನಿಲ್ದಾಣದೊಳಗೆ ನುಗ್ಗಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.  ಈ ಮೊದಲೇ ನಿಲ್ದಾಣದೊಳಗೆ ಪ್ರವೇಶಿಸಿದ್ದ ಸಂಘಟನೆಯ ಮಹಿಳಾ ಕಾರ್ಯಕರ್ತರು, ಚೆನ್ನೈ ಎಕ್ಸ್ ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ರೈಲು ತಡೆದು ಪ್ರತಿಭಟನೆ ನಡೆಸಿದ್ದು, ಅವರನ್ನು ತಡೆಯಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

K R Market (3)

PUR_7593

PUR_7628

PUR_7664

Facebook Comments

Sri Raghav

Admin