ಮಹದಾಯಿ ತೀರ್ಪಿನ ಪುನರ್ ಪರಿಶೀಲನೆಗೆ ವಿಶೇಷ ಮೇಲ್ಮನವಿಗೆ ಸಲ್ಲಿಸಲು ಸರ್ಕಾರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Mahadayiಬೆಂಗಳೂರು,ಆ.5-ದಿನದಿಂದ ದಿನಕ್ಕೆ ತೀವ್ರ  ವಿವಾದ ಪಡೆದುಕೊಳ್ಳುತ್ತಿರುವ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣದ ತೀರ್ಪನ್ನು ಪುನರ್ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ.   ಭಾನುವಾರ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು ಮುಂದಿನ ವಾರ ನ್ಯಾಯಾಧೀಕರಣದ ಮುಂದೆ ವಿಶೇಷ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ.   1957ರ ಅಂತಾರಾಜ್ಯ ನದಿನೀರು ವಿವಾದ ಕಾಯ್ದೆ  ಸೆಕ್ಷನ್ 5 ಉಪನಿಯಮ 3ರಡಿ ನ್ಯಾಯಾಧೀಕರಣದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಮತ್ತೊಮ್ಮೆ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ಸರ್ಕಾರ ನ್ಯಾಯಾಧೀ ಕರಣಕ್ಕೆ ಕೋರಲಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರು ಈ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲರಾದ ಫಾಲಿ ಎಸ್.ನಾರಿಮನ್ ಮತ್ತು ಮೋಹನ್ ಕಾತರಕಿ ಅವರುಗಳೊಂದಿಗೆ ಚರ್ಚೆ ನಡೆಸಿದ್ದಾರೆ.  ನೇರವಾಗಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದರೆ ಹಿನ್ನಡೆ ಉಂಟಾಗಬಹುದು. ನ್ಯಾಯಾಧೀಕರಣ ನೀಡಿರುವ ತೀರ್ಪನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ ನಮಗೆ ಮುಂದಿನ ಕಾನೂನು ಹೋರಾಟದ ದಾರಿಗಳೇ ಇಲ್ಲದಂತಾಗುತ್ತದೆ.

ಏಕಾಏಕಿ ಸುಪ್ರೀಂಕೋರ್ಟ್‍ಗೆ ಹೋಗುವ ಬದಲು ನ್ಯಾಯಾಧೀಕರಣದಲ್ಲೇ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಾರಿಮನ್ ಮತ್ತು ಮೋಹನ್ ಕಾತರಕಿ ಸಲಹೆ ಮಾಡಿದ್ದಾರೆ.
ಈ ಹಿಂದೆ ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದ ಉಂಟಾದ ವೇಳೆ ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ ವೇಳೆ ಹಿನ್ನಡೆಯಾಗಿರುವ ನಿದರ್ಶನಗಳಿವೆ. ಹೀಗಾಗಿ ನ್ಯಾಯಾಧೀಕರಣಕ್ಕೆ ಮನವಿ ಮಾಡುವುದೇ ಸರಿಯಾದ ಮಾರ್ಗ ಎಂದು ವಕೀಲರು ಸಲಹೆ ಮಾಡಿರುವುದರಿಂದ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಪುನರ್ ಪರಿಶೀಲನೆ ಅರ್ಜಿಯಲ್ಲಿ ಏನಿರಲಿದೆ?:

ಅಂದಹಾಗೆ ರಾಜ್ಯ ಸರ್ಕಾರ ಮುಂದಿನ ವಾರ ಸಲ್ಲಿಸಲು ಉದ್ದೇಶಿಸಿರುವ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಲು ತೀರ್ಮಾನಿಸಿದೆ.   ಇದರಲ್ಲಿ ಪ್ರಮುಖವಾಗಿ ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಮೂಲಕ 7.5 ಟಿಎಂಸಿ ನೀರನ್ನು ಕುಡಿಯುವ ನೀರಿನ ಯೋಜನೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಉಳಿದಂತೆ ಕೃಷಿ ಚಟುವಟಿಕೆಗಳಿಗೆ ಇದು ಅನ್ವಯವಾಗುವುದಿಲ್ಲ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿದೆ. ಈ ಭಾಗದ ಸುತ್ತಮುತ್ತ ಸುಮಾರು 25 ಲಕ್ಷಕ್ಕೂ ಹೆಚ್ಚು ಜನ ಕುಡಿಯುವ ನೀರಿಗಾಗಿ ಇದನ್ನೇ ಅವಲಂಬಿಸಿದ್ದಾರೆ.
ನವಲಗುಂದ, ನರಗುಂದ, ಬಾದಾಮಿ, ಸವದತ್ತಿ ಸೇರಿದಂತೆ ಸುಮಾರು 400 ಹಳ್ಳಿಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ಒದಗಿಸಲಾಗುವುದು. ಈ ಹಿಂದೆ ತೆಲುಗು ಗಂಗಾ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣ ಇದೇ ರೀತಿ ಅರ್ಜಿ ತಿರಸ್ಕರಿಸಿದಾಗ ಪುನಃ ಮರುಪರಿಶೀಲನಾ ಅರ್ಜಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿದೆ.
ನ್ಯಾಯಾಧೀಕರಣದ ಉಸ್ತುವಾರಿಯಲ್ಲೇ ಕಾಮಗಾರಿ ನಡೆಯಲಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಒಂದೇ ಒಂದು ಹನಿ ನೀರನ್ನು ಬಳಸಿಕೊಳ್ಳುವುದಿಲ್ಲ ಎಂಬ ಅಂಶಗಳು ಪುನರ್ ಪರಿಶೀಲನಾ ಅರ್ಜಿಯಲ್ಲಿ ಸೇರ್ಪಡೆಯಾಗಲಿವೆ.

ಭಾನುವಾರ ತೀರ್ಮಾನ:

ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ  ಭಾನುವಾರ ಸರ್ವಪಕ್ಷಗಳ ಸಭೆ ನಡೆಯಲಿದೆ. ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಮೇಲ್ಮನೆ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ , ಸಚಿವರಾದ ಟಿ.ಬಿ.ಜಯಚಂದ್ರ, ಎಂ.ಬಿ.ಪಾಟೀಲ್, ರೈತ ಮುಖಂಡರು, ಕಾನೂನು ತಜ್ಞರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin