ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ನಾಟಕವಾಡುತ್ತಿವೆ : ಕೋನರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Konareddy-01

ಬೆಂಗಳೂರು, ಡಿ.8-ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಡಿ.9 ರಂದು ಭೇಟಿಯಾದಾಗ, ನ್ಯಾಯಮಂಡಳಿ ಹೊರಗೆ ಈ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ರಾಜ್ಯದ ಸರ್ವಪಕ್ಷಗಳ ನಿಯೋಗ ಒತ್ತಾಯಿಸಬೇಕೆಂದು ಜೆಡಿಎಸ್ ಶಾಸಕ ಕೋನರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ನಾಟಕವಾಡುತ್ತಿವೆ. ಈ ವಿವಾದವನ್ನು ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಿಂದ 17 ಜನ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಮಹದಾಯಿ ಸಮಸ್ಯೆ ಪರಿಹಾರದಲ್ಲಿ ಬಿಜೆಪಿ ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಬೇಕಾದ ಅಗತ್ಯವಿದೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಮಹದಾಯಿ ವಿಚಾರ ಚರ್ಚೆಯ ಅಜೆಂಡಾದಲ್ಲೇ ಇಲ್ಲ ಎಂದರು.
ಬರ ಪರಿಹಾರ, ರೈತರ ಸಾಲ ಮನ್ನಾ ವಿಷಯಗಳು ಮಾತ್ರ ಇದೆ. ಮಹದಾಯಿ ವಿಷಯ ಈ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಪ್ರಮುಖವಾಗಿ ಮಹದಾಯಿ ವಿವಾದದ ಬಗ್ಗೆ ಪ್ರಸ್ತಾಪಿಸಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವನ್ನು ಕೊಂಡೊಯ್ದು ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸುವಂತೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ಕೇಂದ್ರ ಸಚಿವೆ ಉಮಾಭಾರತಿ ಅವರು, ವಿವಾದ ನ್ಯಾಯಾಧಿಕರಣದ ಮುಂದೆ ಇದೆ. ಹಾಗಾಗಿ ಕೇಂದ್ರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ನ್ಯಾಯಾಧೀಕರಣದ ನ್ಯಾಯಮೂರ್ತಿಗಳಾದ ಜೆ.ಎಂ.ಪಾಂಚಾಳ ಅವರೇ ಮಹದಾಯಿ ವಿವಾದವನ್ನು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಹೀಗಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಿ ಮೋದಿಯವರು ಕರೆಯುವಂತೆ ಒತ್ತಡ ಹೇರಬೇಕೆಂದು ಕೋನರೆಡ್ಡಿ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin