ಮಹದಾಯಿ ವಿವಾದ ಇತ್ಯರ್ಥಪಡಿಸುವುದು ಪ್ರಧಾನಿ ಮೋದಿ ಜವಾಬ್ದಾರಿ: ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

cm-in-press
ಬೆಂಗಳೂರು, ಮೇ 6- ಮಹದಾಯಿ ವಿವಾದ ಇತ್ಯರ್ಥದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸೋನಿಯಗಾಂಧಿ ಅವರ ಹೇಳಿಕೆಗಳನ್ನು ನೆಪವಾಗಿಟ್ಟುಕೊಂಡು ಟೀಕೆ ಮಾಡಲಾಗುತ್ತಿದೆ. ಮಹದಾಯಿ ವಿವಾದ ಇತ್ಯರ್ಥಪಡಿಸಬೇಕಾಗಿದ್ದು ಪ್ರಧಾನಿ ಅವರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆ ನಡೆಸಿ ವಿವಾದ ಬಗೆಹರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಧಾನಿ ಪ್ರತಿಕ್ರಿಯಿಸಲೇ ಇಲ್ಲ. ಹಿಂದೆ ವಾಜಪೇಯಿ, ಪಿ.ವಿ.ನರಸಿಂಹರಾವ್, ಇಂದಿರಾಗಾಂಧಿ ಹಾಗೂ ಹಲವಾರು ಮಂದಿ ವಿವಾದಗಳಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಆದರೆ, ಮೋದಿ ಅವರು ಪ್ರಧಾನಿ ಆಗದೇ ಇರುವ ಸೋನಿಯಾಗಾಂಧಿ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಪ್ರೆಸ್‍ಕ್ಲಬ್‍ನಲ್ಲಿಂದು ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‍ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾತುಮಂಥನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಸಾಮಾನ್ಯವಾಗಿ ಇತ್ತೀಚಿಗೆ ಸೋನಿಯಾಗಾಂಧಿ ಅವರು ಎಲ್ಲಿಯೂ ಪ್ರಚಾರಕ್ಕೆ ಹೋಗುತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಒತ್ತಾಯ ಹೆಚ್ಚಾಗಿದ್ದರಿಂದ ರಾಹುಲ್‍ಗಾಂಧಿ ಅವರ ಮನವೊಲಿಸಿ ಸೋನಿಯಗಾಂಧಿ ಅವರನ್ನು ಪ್ರಚಾರಕ್ಕೆ ಕರೆತರುತ್ತಿದ್ದಾರೆ ಎಂದರು.

cm-in-press-2

ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ:
ರಾಜ್ಯ ಚುನಾವಣೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇರುವಂತೆ ಕಂಡುಬರುತ್ತಿದೆ. ಆದರೆ, ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್‍ನಡುವೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಸ್ಪರ್ಧೆ ಇದೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಏಳು ಜಿಲ್ಲೆಗಳಲ್ಲಿ ಬಿಜೆಪಿ ದುರ್ಬಲವಾಗಿದೆ ಎಂದರು. ಈ ಆರೇಳು ಜಿಲ್ಲೆಗಳಲ್ಲಿ ಜೆಡಿಎಸ್ ಕಾಂಗ್ರೆಸ್‍ಗೆ ಪೈಪೆÇೀಟಿ ನೀಡುತ್ತಿದೆ. ಕರಾವಳಿ ಭಾಗದಲ್ಲಿ 19 ಕ್ಷೇತ್ರಗಳ ಪೈಕಿ ಬಿಜೆಪಿ ನಾಲ್ಕರಲ್ಲಿ ಮಾತ್ರ ಗೆದ್ದಿತ್ತು. ಇಬ್ಬರು ಪಕ್ಷೇತರರು ಸೇರಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದಿದೆ. ಕೋಮು ಪ್ರಚೋದನೆ ಮೂಲಕ ಬಿಜೆಪಿ ಅಲ್ಲಿ ನಾನಾ ರೀತಿಯ ಪ್ರಯೋಗಗಳನ್ನ ಮಾಡುತ್ತಿದೆ. ಆದರೂ ಯಶಸ್ವಿಯಾಗುವುದಿಲ್ಲ ಎಂದರು. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ದಿನಾಂಕ ನಿಗದಿ ಮಾಡಿದ್ದಾರೆ. ಕುಮಾರಸ್ವಾಮಿ ನಾನು ಕಿಂಗ್ ಮೇಕರ್ ಅಲ್ಲ. ಕಿಂಗ್ ಎಂದು ಹೇಳಿಕೊಂಡಿದ್ದಾರೆ. ಅವರ ಅಭಿಪ್ರಾಯಗಳಿಗೆ ನನಗೆ ವಿರೋಧವಿಲ್ಲ. ಆದರೆ, ನಾವು ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು. ಕಾಂಗ್ರೆಸ್‍ನಲ್ಲಿ ಶಾಸಕರು ಮತ್ತು ಹೈಕಮಾಂಡ್ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಎಂದು ಪರಮೇಶ್ವರ್ ಹೇಳಿಕೆಗೆ ನನ್ನ ಸಹಮತವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನನ್ನನ್ನು ಬೆಳೆಸಿದ್ದು ದೇವೇಗೌಡರಲ್ಲ:
ರಾಜಕೀಯವಾಗಿ ನನ್ನನ್ನು ಬೆಳೆಸಿದ್ದು ದೇವೇಗೌಡರಲ್ಲ. ಜೆಡಿಎಸ್ ನನ್ನ ಪೂರ್ವಾಶ್ರಮದ ಪಕ್ಷ ಅಲ್ಲ. ನಾನು ರಾಜಕೀಯ ಆರಂಭಿಸಿದ್ದು ಸೋಸಿಯಲಿಸ್ಟ್ ಪಾರ್ಟಿಯಿಂದ. ಪಕ್ಷೇತರನಾಗಿ ಗೆದ್ದಿದ್ದೆ. ರಾಮಕೃಷ್ಣ ಹೆಗಡೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಕೆಲವು ಬಾರಿ ಗೆದ್ದಿದ್ದೇನೆ, ಇನ್ನೂ ಕೆಲವು ಬಾರಿ ಸೋತಿದ್ದೇನೆ. ಇದ್ಯಾವುದಕ್ಕೂ ದೇವೇಗೌಡರು ಕಾರಣರಲ್ಲ. 1994ರಲ್ಲಿ ಎಂ.ಪಿ.ಪ್ರಕಾಶ್, ಬೈರೇಗೌಡ ನಾನೂ ಸೇರಿದಂತೆ ಹಲವಾರು ಮಂದಿ ಜತೆಗೂಡಿದ್ದರಿಂದ ಜನತಾದಳ ಅಧಿಕಾರಕ್ಕೆ ಬಂತು. ದೇವೇಗೌಡರು ಮುಖ್ಯಮಂತ್ರಿಯಾದರು.  ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎಂಬುದು ಸುಳ್ಳು ಆರೋಪ. ಅಡ್ವಾಣಿ ಅವರ ಜತೆ ಆತ್ಮೀಯ ಸಂಬಂಧವಿತ್ತು. ಅವರನ್ನು ಭೇಟಿ ಮಾಡಿದ್ದು ನಿಜ. ಜನತಾದಳ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಜೆಡಿಯುಗೆ ಬರುವಂತೆ ಜಾರ್ಜ್ ಫರ್ನಾಂಡೀಸ್ ಕರೆದಾಗಲೂ ನಾವು ಜೆಡಿಎಸ್ ಬಿಟ್ಟು ಹೋಗಲಿಲ್ಲ ಎಂದು ಹೇಳಿದರು.
ದೇವೇಗೌಡರು ಉತ್ತಮ ನಾಯಕರು ಆದರೆ, ನನ್ನನ್ನು ಬೆಳೆಸಿದ್ದು ಅವರಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಆನಂದ್‍ಸಿಂಗ್ ಮತ್ತು ನಾಗೇಂದ್ರ ಅವರನ್ನು ಬಿಜೆಪಿಯಿಂದ ಕರೆತಂದು ಕಾಂಗ್ರೆಸ್ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಆನಂದ್‍ಸಿಂಗ್ ಅವರ ಮೇಲಿನ ಆರೋಪ ದೊಡ್ಡದಲ್ಲ. ಇವರಿಬ್ಬರ ಮೇಲೆ ನಾವು ಹೋರಾಟ ಮಾಡಿರಲಿಲ್ಲ. ನಾನು ಪಾದಯಾತ್ರೆ ಮಾಡಿದ್ದು ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ವಿರುದ್ಧ. ರೆಡ್ಡಿ ಸಹೋದರ ಸೋಮಶೇಖರರೆಡ್ಡಿ ನ್ಯಾಯಾಧೀಶರಿಗೇ ಲಂಚ ನೀಡಲು ಹೋಗಿ ಜೈಲಿಗೆ ಹೋಗಿರಲಿಲ್ಲವೇ ಎಂದು ಪ್ರಶ್ನಿಸಿದರು.  ಜೆಡಿಎಸ್ ಪಕ್ಷದ ಬಗ್ಗೆ ನಾನು ಮೃದು ಧೋರಣೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಅಡ್ವಾಣಿ ಮತ್ತು ಮುರಳಿಮನೋಹರ ಜೋಷಿ ಅವರನ್ನು ಮೂಲೆಗುಂಪು ಮಾಡಿದ ಮೋದಿ ಅವರಿಂದ ಹಿರಿಯರಿಗೆ ಗೌರವ ಕೊಡುವುದನ್ನು ನಾನು ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

Facebook Comments

Sri Raghav

Admin