ಮಹದಾಯಿ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಕಣಕುಂಬಿಗೆ ಗೋವಾ ಶಾಸಕರ ನಿಯೋಗ ಭೇಟಿ
ಬೆಂಗಳೂರು, ಜ.28- ರಾಜ್ಯಾದ್ಯಂತ ಮಹದಾಯಿ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಗೋವಾ ಶಾಸಕರ ನಿಯೋಗ ಕರ್ನಾಟಕ ಭಾಗದ ಮಹದಾಯಿ ಕೊಳ್ಳಕ್ಕೆ ದಿಢೀರ್ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಗೋವಾ ಶಾಸಕರು, ಮಾಜಿ ಶಾಸಕರು, ಸ್ಪೀಕರ್, ಉಪ ಸ್ಪೀಕರ್, ಮಾಧ್ಯಮದವರು ಸೇರಿದಂತೆ 40 ಜನರ ತಂಡ ನಿಯೋಗದಲ್ಲಿ ಆಗಮಿಸಿದ್ದು ಆಶ್ಚರ್ಯ ಮೂಡಿಸಿದೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕೂಡ ನಿಯೋಗದಲ್ಲಿ ಆಗಮಿಸಬೇಕಾಗಿದ್ದು, ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿ ಪಣಜಿಯಲ್ಲೇ ಉಳಿದದ್ದು ಗೋವಾ ಸರ್ಕಾರದ ಸ್ಪೀಕರ್ ಪ್ರಮೋದ್ ಸಾವಂತ್, ಉಪ ಸ್ಪೀಕರ್ ಮೈಕಲ್ ಲೋಬೋ, ಜಿಟಿಡಿಸಿ ಅಧ್ಯಕ್ಷ ನೀಲೇಶ್ ಕ್ಯಾಬ್ರಿಲ್, ಶಾಸಕರಾದ ಪ್ರಸಾದ್ ಗಾಂವ್ಕರ್, ರೋಲ್ಯಾಂಡ್ ರ್ಯಾಲೆನ್ಸ್ ಅವರ ತಂಡ ಯಾವುದೇ ಪೂರ್ವ ಮಾಹಿತಿಯಿಲ್ಲದೆ ಮಹದಾಯಿ ನದಿ ಪಾತ್ರದ ಕಣಕುಂಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯಾದ್ಯಂತ ಮಹದಾಯಿಗಾಗಿ ಆಗ್ರಹಿಸಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ತೀವ್ರ ಹೋರಾಟ, ರಾಜ್ಯ ಬಂದ್, ರೈತರಿಂದ ಪ್ರತಿಭಟನೆ ನಡೆಯುತ್ತಿದೆ. ನಿನ್ನೆಯಷ್ಟೆ ಸರ್ವಪಕ್ಷ ಸಭೆ ನಡೆದು ಒಮ್ಮತ ಬರಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ ಎಂದು ಹೇಳಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಹದಾಯಿ ವಿವಾದದ ಸಂಬಂಧ ಬಿಜೆಪಿ ವಿರೋಧಿ ಧೋರಣೆ ಹೆಚ್ಚಾಗುತ್ತಿದ್ದು, ಈ ಯೋಜನೆಗೆ ಅನಿವಾರ್ಯವಾಗಿ ಸಹಮತ ವ್ಯಕ್ತಪಡಿಸುವ ಪರಿಸ್ಥಿತಿ ಗೋವಾಗೆ ಎದುರಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ, ಗೋವಾದಲ್ಲಿ ಸದ್ಯದಲ್ಲೇ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿ ಮಹದಾಯಿ ವಿವಾದದ ಬಗ್ಗೆ ಸಮರ್ಥನೆ ನೀಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ಪೂರ್ವ ಮಾಹಿತಿ ಇಲ್ಲದೆ ಗೋವಾ ತಂಡ ಗಡಿ ಪ್ರದೇಶಕ್ಕೆ ಬಂದು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೊಳಿಸದಿದ್ದರೆ ರೈತರು ಅಭ್ಯರ್ಥಿಗಳನ್ನು ಗ್ರಾಮದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ.
ಹಾಗಾಗಿ ಕೇಂದ್ರ ಸರ್ಕಾರ ಒಂದು ನಿರ್ಣಯಕ್ಕೆ ಬರಲೇಬೇಕಿದೆ. ಕೇಂದ್ರ ಸರ್ಕಾರ ಕಣಕುಂಬಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ಪರೋಕ್ಷ ಸೂಚನೆ ಮನೋಹರ್ ಪರಿಕ್ಕರ್ ಅವರಿಗೆ ಕೊಟ್ಟಿರುವ ಲಕ್ಷಣಗಳು ಕಂಡುಬರುತ್ತಿವೆ. ಹಾಗಾಗಿ ಅವರ ಸೂಚನೆಯಂತೆ ಅಲ್ಲಿನ ನಿಯೋಗ ಭೇಟಿ ನೀಡಿರಬಹುದು ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ಗೋವಾ ಜಲಸಂಪನ್ಮೂಲ ಸಚಿವ ಕಣಕುಂಬಿಗೆ ಭೇಟಿ ನೀಡಿದ್ದು, ಇಂದು ದಿಢೀರ್ ಎಂದು ಗೋವಾದ ಶಾಸಕರು ಮತ್ತು ಸ್ಪೀಕರ್ ನಿಯೋಗ ಭೇಟಿ ನೀಡಿರುವುದನ್ನು ಗಮನಿಸಿದರೆ ಚುನಾವಣೆಯೊಳಗೇ ಈ ಯೋಜನೆ ಜಾರಿ ಸಂಬಂಧ ಗೋವಾ ಸರ್ಕಾರದಿಂದ ಸಕಾರಾತ್ಮಕ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.