ಮಹದಾಯಿ ಹೋರಾಟಗಾರರ ಕೇಸ್ ಹಿಂಪಡೆದು ಪರಿಹಾರ ನೀಡುವಂತೆ ಕೋನರೆಡ್ಡಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Konareddy-Session

ಬೆಂಗಳೂರು, ಫೆ.9-ಮಹದಾಯಿ ನದಿ ನೀರಿಗಾಗಿ ಹೋರಾಟ ನಡೆಸಿದ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆ ವಾಪಸ್ ಪಡೆಯಬೇಕು, ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ನೀಡಬೇಕೆಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.
ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅವರು, ಮಹದಾಯಿ ನ್ಯಾಯಾಧೀಕರದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾನೂನು ಹಾಗೂ ತಾಂತ್ರಿಕ ವಿಚಾರದಲ್ಲಿ ಎಚ್ಚರಿಕೆಯ ಹೋರಾಟ ನಡೆಸಬೇಕು. ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಇತ್ಯರ್ಥ ಪಡಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡುವಂತೆ ಒತ್ತಡ ಹೇರಬೇಕು, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ದಿನಾಂಕ ನಿಗದಿಗೊಳಿಸಬೇಕು, ಪಕ್ಷಾತೀತವಾಗಿ ನೆನೆಗುದಿಗೆ ಬಿದ್ದಿರುವ ಮಹದಾಯಿ ವಿವಾದವನ್ನು ಇತ್ಯರ್ಥ ಪಡಿಸಿ ಉತ್ತರ ಕರ್ನಾಟಕದ 4 ಜಿಲ್ಲೆ, 13 ತಾಲೂಕುಗಳಿಗೆ 7.56 ಟಿಎಂಸಿ ನೀರು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಹದಾಯಿ ಹೋರಾಟಗಾರರ ಮೇಲೆ ಹೂಡಿರುವ 26 ಪ್ರಕರಣಗಳು ಇನ್ನೂ ಬಾಕಿಯಿದ್ದು, ಬಜೆಟ್ ಅಧಿವೇಶನದ ವೇಳೆಗೆ ವಾಪಸ್ ಪಡೆಯಬೇಕು. ಮಹದಾಯಿ ಹೋರಾಟದಲ್ಲಿ 12 ಮಂದಿ ಮೃತಪಟ್ಟಿದ್ದು, ಇನ್ನು 9 ಪ್ರಕರಣಗಳಲ್ಲಿ ಪರಿಹಾರ ಕೊಟ್ಟಿಲ್ಲ. ಕೂಡಲೇ ಪರಿಹಾರ ಕೊಡುವಂತಾಗಬೇಕು. ರಾಜ್ಯದ ನೆಲ, ಜಲ ವಿಚಾರದಲ್ಲಿ ಮೂರೂ ಪಕ್ಷಗಳು ಒಂದಾಗಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು. 210 ಟಿಎಂಸಿ ನೀರು ಬಳಕೆಯಾಗದೆ ಸಮುದ್ರದ ಪಾಲಾಗುತ್ತಿದೆ ಎಂದ ಅವರು, ಈ ಹಿಂದಿನ ಪ್ರಧಾನಿಗಳು ಕುಡಿಯುವ ನೀರಿನ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದಂತೆ ಈಗಿನ ಪ್ರಧಾನಿಯೂ ಮಾಡಬೇಕು ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಆರೋಪಗಳನ್ನು ಮಾಡುವುದನ್ನು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಗಂಭೀರ ಪ್ರಯತ್ನ ಮಾಡಬೇಕು. ಗೋವಾ ರಾಜ್ಯ ತಪ್ಪು ಸಂದೇಶಗಳನ್ನು ನೀಡುತ್ತಿದೆ. ಗೋವಾ ಪರ ನ್ಯಾಯಾಧೀಕರಣದಲ್ಲಿ ವಾದ ಮಂಡಿಸುತ್ತಿರುವ ವಕೀಲ ಆತ್ಮಾನಂದ ನಾಡಕರ್ಣಿ ರಾಜ್ಯದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಸೇರಿದಂತೆ ಮಹದಾಯಿ ನದಿ ನೀರಿಗಾಗಿ ದೊಡ್ಡ ಪ್ರಮಾಣದ ಹೋರಾಟ ನಡೆಸುತ್ತಾ ಬಂದಿದ್ದರೂ ಸಮಸ್ಯೆ ಮಾತ್ರ ಹಾಗೇ ಉಳಿದಿದೆ ಎಂದರು. ಇದಕ್ಕೆ ದನಿಗೂಡಿಸಿದ ಹಿರಿಯ ಶಾಸಕ ಬಿ.ಆರ್.ಪಾಟೀಲ್, ಕೇಂದ್ರ ಸರ್ಕಾರ ನದಿ ಜೋಡಣೆ ಯೋಜನೆ ಪ್ರಸ್ತಾಪಿಸಿದ್ದು, ಅದರ ವ್ಯಾಪ್ತಿಗೆ ಈ ವಿಚಾರ ಬರುತ್ತದೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin