ಮಹದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದ 187 ಮಂದಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Released---1

ಧಾರವಾಡ,ಆ.12- ಕೊನೆಗೂ ಮಹದಾಯಿ ಹೋರಾಟಗಾರರಿಗೆ  ಜೈಲಿನಿಂದ ಬಿಡುಗಡೆಯಾಗಿದೆ. ಕಳೆದ ಎರಡು ವಾರಗಳಿಂದ ರಾಜ್ಯದ ವಿವಿಧ ಜೈಲುಗಳಲ್ಲಿದ್ದ 187 ರೈತರನ್ನು ಇಂದು ಷರತ್ತುಬದ್ಧ ಜಾಮೀನಿನ  ಮೇಲೆ ನ್ಯಾಯಾಲಯ ಬಿಡುಗಡೆ ಮಾಡಿದೆ.  ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 187 ಜನರನ್ನು ಬಂಧಿಸಿ 25 ಪ್ರಕರಣಗಳನ್ನು ದಾಖಲಿಸಿ ಧಾರವಾಡ, ಬಳ್ಳಾರಿ ಹಾಗೂ ಚಿತ್ರದುರ್ಗ ಜೈಲುಗಳಲ್ಲಿ ಇಡಲಾಗಿತ್ತು.  ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ 187 ಮಂದಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ದೊರೆತಂತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಈಗಾಗಲೇ 14 ಮಂದಿ ಜಾಮೀನು ಪಡೆದಿದ್ದಾರೆ.  ವರಮಹಾಲಕ್ಷ್ಮಿ ಪೂಜೆ ದಿನವಾದ ಇಂದು ಜೈಲಿನಿಂದ ಬಿಡುಗಡೆಯಾದ ಮಹದಾಯಿ ಹೋರಾಟಗಾರರು ಸಂಭ್ರಮಾಚರಣೆ ಮಾಡಿದರು.

Released-2

ವಿಶೇಷವಾಗಿ ಯಮನೂರು ಗ್ರಾಮದಲ್ಲಿ ಸಂತಸ ಮನೆ ಮಾಡಿತ್ತು. ಮಹದಾಯಿ ಮಧ್ಯಂತರ ತೀರ್ಪು ಪ್ರಕಟವಾದ ನಂತರ ನಡೆದ ಗಲಭೆ ಪ್ರಕರಣದಲ್ಲಿ 187 ಜನರ ವಿರುದ್ಧ 25 ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿತ್ತು. ಸರ್ಕಾರದ ಅಭಿಯೋಜಕರು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲಿಲ್ಲ.  ಹೀಗಾಗಿ ಬಂಧಿತ ಎಲ್ಲ ಹೋರಾಟಗಾರರಿಗೆ ನ್ಯಾಯಾಧೀಶರಾದ ಶ್ರೀಶಾನಂದ ಅವರು ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದರು.  ಜಾಮೀನು ಪಡೆದಿರುವ ಹೋರಾಟಗಾರರು ತಲಾ 50 ಸಾವಿರ ರೂ. ಭದ್ರತಾ ಠೇವಣಿ ಇಡಬೇಕು. ಪ್ರತೀ ಸೋಮವಾರ ನವಲಗುಂದ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಸಾಕ್ಷ್ಯಾಧಾರಗಳನ್ನು ನಾಶ ಮಾಡಬಾರದು. ಯಾವುದೇ ದೊಂಬಿ, ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ಜಿಲ್ಲೆ ಬಿಟ್ಟು ಹೊರಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಬಂಧಿತ ಹೋರಾಟಗಾರ ಪರವಾಗಿ ಧಾರವಾಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಅವರು ವಕಾಲತು ವಹಿಸಿದ್ದರು.

Released-4

ಜಾಮೀನು ದೊರೆತ ಸುದ್ದಿ ತಿಳಿಯುತ್ತಿದ್ದಂತೆ ನ್ಯಾಯಾಲಯದ ಹೊರಭಾಗದಲ್ಲಿ ಜಮಾಯಿಸಿದ್ದ ರೈತರ ಬಂಧುಗಳು, ವಿವಿಧ ಸಂಘಟನೆಗಳ ಮುಖಂಡರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಕೂಡ ರೈತರ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದರು.  ರೈತರನ್ನು ಬಂಧಿಸಿದ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಯಮನೂರಿನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ, ಮಹಿಳೆಯರು, ವೃದ್ಧರ ಮೇಲೆ ನಡೆಸಿದ ಅಮಾನವೀಯ ಹಲ್ಲೆ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ, ಧರಣಿ ಸತ್ಯಾಗ್ರಹಗಳು ನಡೆದಿದ್ದವು. ಬಂಧಿತ ರೈತರನ್ನು ಬಿಡುಗಡೆ ಮಾಡಬೇಕೆಂದು ಪ್ರತಿಪಕ್ಷಗಳು, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ರೈತ ಸಂಘಗಳು ತೀವ್ರ ಪ್ರತಿಭಟನೆ ನಡೆಸಿದ್ದವು.   ಕಳೆದ 10ರಂದು ನಡೆದ ಸಚಿವ ಸಂಪುಟದಲ್ಲಿ ರೈತರ ಬಿಡುಗಡೆ ಬಗ್ಗೆ ಚರ್ಚೆಯಾಯಿತಾದರೂ ಕೆಲವು ಕಾನೂನಾತ್ಮಕ ಅಂಶಗಳಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆದರೆ, ರೈತರು ಜಾಮೀನು ಪಡೆಯಲು ಮುಂದಾದರೆ ಸರ್ಕಾರದ ವತಿಯಿಂದ ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು.

Released-3

 

► Follow us on –  Facebook / Twitter  / Google+

Facebook Comments

Sri Raghav

Admin