ಮಹಾದೇವಪುರಕ್ಕೆ ಕಸಸುರಿಯುತ್ತಿರುವ ಬಿಬಿಎಂಪಿ ವಿರುದ್ಧ ಲಿಂಬಾವಳಿ ನೇತೃತ್ವದಲ್ಲಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Protst--01

ಬೆಂಗಳೂರು, ಮಾ.14– ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರದ ಕಸವನ್ನು ತಂದು ಸುರಿಯುತ್ತಿರುವ ಬಿಬಿಎಂಪಿ ಧೋರಣೆ ಖಂಡಿಸಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಾಲಿಕೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಅರವಿಂದ ಲಿಂಬಾವಳಿ ಮಾತನಾಡಿ, ಮಹದೇವಪುರ ವಲಯಕ್ಕೆ ಅನುದಾನ ಬಿಡುಗಡೆ ಮಾಡಲು ಹಿಂದೆ-ಮುಂದೆ ನೋಡುವ ಬಿಬಿಎಂಪಿಯವರು ಇಡೀ ನಗರದ ಕಸವನ್ನು ಮಹದೇವಪುರಕ್ಕೆ ತಂದು ಸುರಿಯುತ್ತಿದ್ದಾರೆ. ಇಲ್ಲಿನ ರಾಮ್‍ಪುರ ಕೆರೆ ಮತ್ತಿತರ ಭಾಗಗಳಲ್ಲಿ ಕಸದ ರಾಶಿ ಸಂಗ್ರಹವಾಗುತ್ತಿದೆ. ಕಸ ಹಾಕುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರೂ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ. ಸಮಾಧಾನದಿಂದಿರಿ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತೇವೆ ನಮ್ಮೊಂದಿಗೆ ಸಹಕರಿಸಿ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗುಡುಗಿದರು.

ನಾವು ಕೂಡ ಸಾಮಾಜಿಕ ಕಳಕಳಿಯಿಂದ ಇದುವರೆಗೆ ಕಸ ಹಾಕಲು ಕಾಲಾವಕಾಶ ನೀಡಿದ್ದೆವು. ಆದರೆ ಇತ್ತೀಚೆಗೆ ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.  ಮಹದೇವಪುರ ಎಂಬ ಹೆಸರು ಕೇಳಿದರೆ ಸಾಕು ಇಲ್ಲಿಗೆ ಯಾರೂ ಹೆಣ್ಣು ಕೊಡುವುದಿಲ್ಲ. ನಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುವುದು ಮಹದೇವಪುರದಿಂದಲೇ. ಆದರೆ ಅದೇ ಮಹದೇವಪುರ ಈಗ ಕಸದ ಕೊಂಪೆಯಾಗಿದೆ. ಇದು ಹೀಗೇ ಮುಂದುವರೆದರೆ ನೂರಾರು ಮಂದಿ ರೋಗರುಜಿನಗಳಿಗೆ ಬಲಿಯಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಇಲ್ಲಿ ಕಸ ಹಾಕಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಲಿಂಬಾವಳಿ ಎಚ್ಚರಿಸಿದರು. ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin