ಮಹಾಮಳೆಗೆ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

CM-Visit--02

ಬೆಂಗಳೂರು, ಅ.14- ಮಳೆಯಿಂದ ಅನಾಹುತಗಳಾಗಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡಿಗರ ಸಮಾವೇಶ ಜಾನಪದ ಸಂಭ್ರಮದಲ್ಲಿ ಮಾತನಾಡಿದ ಅವರು, ನಿನ್ನೆ ಸುರಿದ ಮಳೆಯಿಂದ ನಾಲ್ಕೈದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1983ರಿಂದಲೂ ನಾನು ಬೆಂಗಳೂರಿನಲ್ಲಿ ವಾಸಿಸಿದ್ದೇನೆ. ಇಂತಹ ಮಳೆಯನ್ನು ಯಾವ ಕಾಲದಲ್ಲೂ ನೋಡಿಲ್ಲ. ಆ.14ರಿಂದ ಈವರೆಗೂ 60 ದಿನಗಳಲ್ಲಿ 46-47 ದಿನ ನಿರಂತರವಾಗಿ ಮಳೆಯಾಗಿದೆ. ಇತಿಹಾಸದ ಯಾವ ಕಾಲದಲ್ಲೂ ಇಷ್ಟು ಮಳೆ ಬಿದ್ದ ಉದಾಹರಣೆಗಳಿಲ್ಲ ಎಂದರು.

ಕುಡಿಯುವ ನೀರಿಗೆ, ರೈತರ ಕೃಷಿಗೆ, ಜಾನುವಾರುಗಳಿಗೆ, ಅಂತರ್ಜಲ ಅಭಿವೃದ್ಧಿಗೆ ಮಳೆ ಬೇಕೆಂದು ಪ್ರಾರ್ಥನೆ ಮಾಡಲಾಗುತ್ತಿತ್ತು. ನನಗೆ ಅದರಲ್ಲಿ ನಂಬಿಕೆ ಇಲ್ಲದಿದ್ದರೂ ಪ್ರಾರ್ಥನೆಗೆ ಮನ್ನಣೆ ಸಿಕ್ಕಿದೆ. ಪ್ರಾರ್ಥನೆ ಮಾಡಿದವರೆಲ್ಲರಿಗೂ ಧನ್ಯವಾದಗಳು ಎಂದರು.ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅರ್ಚಕರೊಬ್ಬರು ಕೊಚ್ಚಿ ಹೋಗಿದ್ದಾರೆ. ಲಗ್ಗೆರೆಯಲ್ಲಿ ಗೋಡೆ ಕುಸಿದು ದಂಪತಿ ಸಾವನ್ನಪ್ಪಿದ್ದರೆ, ಕುರುಬರಹಳ್ಳಿ ಜೆ.ಸಿ.ನಗರದಲ್ಲಿ ತಾಯಿ -ಮಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಮೃತಪಟ್ಟವರ ಎಲ್ಲಾ ಕುಟುಂಬಗಳಿಗೂ ತಲಾ 5 ಲಕ್ಷ ಪರಿಹಾರ ನೀಡಲಾಗುವುದು. ಈ ಪರಿಹಾರದಿಂದ ಆ ಕುಟುಂಬಗಳಿಗೆ ತೃಪ್ತಿ ಸಿಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಸರ್ಕಾರ ನಿಮ್ಮ ಕಷ್ಟದಲ್ಲಿ ಬಾಗಿಯಾಗಿದ್ದೇವೆ ಎಂದು ಹೇಳುವ ಸಲುವಾಗಿ ಪರಿಹಾರ ನೀಡುತ್ತಿದೆ ಎಂದು ಹೇಳಿದರು. ಮೃತಪಟ್ಟ ದಂಪತಿಯನ್ನು ನೋಡಲು ನಾನು ಅಲ್ಲಿಗೆ ತೆರಳುತ್ತಿದ್ದೇನೆ. ನಿರಂತರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ರಾಜಕಾಲುವೆಗಳನ್ನು ಸರಿ ಮಾಡಲು ಆಗುತ್ತಿಲ್ಲ. ಸಾವು-ನೋವುಗಳು ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಹೇಳಿದರು.

Facebook Comments

Sri Raghav

Admin