ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ : ಚಿಕ್ಕೋಡಿ ತಾಲೂಕಿನಲ್ಲಿ ಜಲಪ್ರಳಯ

ಈ ಸುದ್ದಿಯನ್ನು ಶೇರ್ ಮಾಡಿ

sdgsgfgಚಿಕ್ಕೋಡಿ, ಆ.5- ನೆರೆಯ ಮಹಾರಾಷ್ಟ್ರದಲ್ಲಿ ಮುಂದುವರಿದಿರುವ ಮಳೆಯಿಂದ ಚಿಕ್ಕೋಡಿ ತಾಲೂಕಿನಲ್ಲಿ ಜಲಪ್ರಳಯದ ಪರಿಸ್ಥಿತಿ ಉಂಟಾಗಿದ್ದು, ತಾಲೂಕಿನ ಎಲ್ಲ ಸೇತುವೆಗಳು ಮುಳುಗಡೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.   ಕೃಷ್ಣಾ ನದಿತೀರದ ಹಳ್ಳಿಗಳ ಜನರು ನದಿತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಕೆಲವೆಡೆ ಸೇತುವೆಗಳು ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವುಂಟಾಗಿದೆ.  ವೇದಗಂಗಾ ನದಿಯ ಜತ್ರಾಟ, ಬಿವಶಿ, ಅಕ್ಕೋಳ, ಸಿದ್ನೋಳ, ಭೋಜವಾಡಿ, ಉಂದರಗಿ ಸೇತುವೆಗಳ ಸಂಪರ್ಕ ಕಡಿತಗೊಂಡಿದೆ. ದೂದ್‍ಗಂಗಾ ನದಿಯ ಖಾರದಗ, ಭೋಜ, ಮಲ್ಲಿಕವಾಡ, ದತ್ತವಾಡ, ಸದಲಗ, ಬೋರ್‍ಗಾಂವ್ ಸೇತುವೆಗಳು ಕುಸಿದುಹೋಗಿದ್ದು, ಜನ-ಜಾನುವಾರುಗಳ ಪರಿಸ್ಥಿತಿ ಅಯೋಮಯವಾಗಿದೆ.

ಕೃಷ್ಣಾ ನದಿಯ ಕಲ್ಲೋಳ, ಯಡೋರಾ  ಸೇತುವೆಗಳು ಜಲಾವೃತಗೊಂಡಿವೆ. ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ನೆರೆಯ ಮಹಾರಾಷ್ಟ್ರದ ರಾಜಪುರಿ ಡ್ಯಾಮ್‍ನಿಂದ ಕೃಷ್ಣಾನದಿಗೆ ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಯಬಿಡಲಾಗುತ್ತಿದೆ. ಹಿಪ್ಪರಗಿ ಜಲಾಶಯದಿಂದ ಆಲಮಟ್ಟಿ ಡ್ಯಾಮ್‍ನಿಂದ 1.32 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಡ್ಯಾಮ್‍ನ 22 ಗೇಟ್‍ಗಳನ್ನು ಓಪನ್ ಮಾಡಿ ನೀರನ್ನು ಹೊರಬಿಡಲಾಗಿದೆ.

ಕೃಷ್ಣಾ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಕಲಬುರಗಿ ರಸ್ತೆ ಬಂದ್ ಆಗಿದ್ದು, ದೇವದುರ್ಗ ಬಳಿಯ ಹೂವಿನ ಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸಂಚಾರ ಬಂದ್ ಆಗಿರುವುದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.   ಮಹಾರಾಷ್ಟ್ರದಲ್ಲಿನ ಧಾರಾಕಾರ ಮಳೆಯಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಕೊಳ್ಳೂರು ಸೇತುವೆ ಕೂಡ ಜಲಾವೃತವಾಗಿದೆ. ಶಹಪುರದಿಂದ ದೇವದುರ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.  ನದಿ ಪಕ್ಕದ ಜಮೀನುಗಳಿಗೆಲ್ಲ ನೀರು ನುಗ್ಗಿದ್ದರಿಂದ ಇದ್ದ ಬೆಳೆಯೆಲ್ಲ ನಷ್ಟವಾಗಿದೆ. ಹೊಲದಲ್ಲಿದ್ದ ಪಂಪ್‍ಸೆಟ್‍ಗಳನ್ನು ಹೊರತರಲು ರೈತರು ಹರಸಾಹಸ ಪಡುತ್ತಿದ್ದಾರೆ.

Facebook Comments

Sri Raghav

Admin