ಮಹಾರಾಷ್ಟ್ರದ ಡಿಸಿಸಿ ಬ್ಯಾಂಕ್‍ಗಳಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ 5,000 ಕೋಟಿ ರೂ.ಠೇವಣಿ…!

ಈ ಸುದ್ದಿಯನ್ನು ಶೇರ್ ಮಾಡಿ

Fixed-Deposit

ಮುಂಬೈ, ಡಿ.15-ಮಹಾರಾಷ್ಟ್ರದ ಜಿಲ್ಲಾ ಪತ್ತಿನ ಸಹಕಾರಿ ಬ್ಯಾಂಕ್‍ಗಳಲ್ಲಿ (ಡಿಸಿಸಿ) ಕೇವಲ ನಾಲ್ಕೇ ದಿನಗಳಲ್ಲಿ 5,000 ಕೋಟಿ ರೂ.ಗಳ ಹಳೆ ನೋಟುಗಳನ್ನು ಠೇವಣಿ ಇಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಕಾಳಧನ ಪರಿವರ್ತನೆ ಅಕ್ರಮಗಳು ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ತೀವ್ರಗೊಂಡಿದೆ. 500 ರೂ. ಮತ್ತು 1,000 ರೂ.ಗಳ ಹಳೆ ನೋಟುಗಳನ್ನು ನವೆಂಬರ್ 8ರಂದು ರದ್ದುಗೊಳಿಸಲಾಗಿತ್ತು. ಅದಾದ ನಂತರ ನವೆಬರ್ 10 ರಿಂದ 14ರವರೆಗೆ ಕೇವಲ ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರದ ವಿವಿಧ ಡಿಸಿಸಿ ಬ್ಯಾಂಕುಗಳಲ್ಲಿ 5,000 ಕೋಟಿ ರೂ.ಗಳಿಗೂ ಹೆಚ್ಚು ಠೇವಣೆ ಸಂಗ್ರಹವಾಗಿದೆ.

ಈ ಬ್ಯಾಂಕ್‍ಗಳಲ್ಲಿ ರೈತರು ಮತ್ತು ಸ್ಥಳೀಯ ಗ್ರಾಮಸ್ಥರು ಹೆಚ್ಚಾಗಿ ಖಾತೆಗಳನ್ನು ಹೊಂದಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ಹಣ ಸಂಗ್ರಹವಾಗಿರುವುದರಿಂದ ನಬಾರ್ಡ್ (ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್) ಮತ್ತು ಅದಾಯ ತೆರಿಗೆ ಅಧಿಕಾರಿಗಳ ಹುಬ್ಬೇರುವಂತೆ ಮಾಡಿದೆ. ಇದರಲ್ಲಿ ಶಂಕಾಸ್ಪದ ಠೇವಣಿಗಳು ಅಥವಾ ಹಣಕಾಸು ದುವ್ರ್ಯವಹಾರ ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ಕೈಗೊಂಡಿದೆ. ಈ ಬ್ಯಾಂಕ್‍ಗಳಲ್ಲಿರುವ ಕೆಲವು ಖಾತೆಗಳಲ್ಲಿ ಭಾರೀ ಮೊತ್ತದ ನಗದನ್ನು ಠೇವಣಿಯಾಗಿಡಲು ಬಳಸಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 31 ಡಿಸಿಸಿ ಬ್ಯಾಂಕ್‍ಗಳು ಸ್ಥಳೀಯ ರಾಜಕಾರಣಿಗಳ ನಿಯಂತ್ರಣದಲ್ಲಿದ್ದು, ಇವರಲ್ಲಿ ಕೆಲವರು ಈ ಹಿಂದೆ ಹಣಕಾಸು ಅವ್ಯವಹಾರಗಳನ್ನು ನಡೆಸಿರುವ ವರದಿಗಳಿವೆ.

ಅಮಾನ್ಯಗೊಂಡ ಹಳೆ ನೋಟುಗಳನ್ನು ಠೇವಣಿಯಾಗಿಡಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಅವಕಾಶ ನೀಡಿದ ಅಲ್ಪ ಸಮಯದಲ್ಲೇ, ಅದರಲ್ಲೂ ನಾಲ್ಕು ದಿನಗಳ ಅವಧಿಯಲ್ಲಿ 3,800ಕ್ಕೂ ಹೆಚ್ಚು ಶಾಖೆಗಳಲ್ಲಿ ಭಾರೀ ಠೇವಣಿ ಸ್ವೀಕೃತವಾಗಿರುವುದರಿಂದ ಅಕ್ರಮ-ಅವ್ಯವಹಾರದ ಹೊಗೆಯಾಡುತ್ತಿದೆ. ತನಿಖೆ ತೀವ್ರಗೊಂಡಿದ್ದು, ಕಾಳಧನಿಕರು, ರಾಜಕಾರಣಿಗಳು ಮತ್ತು ಪ್ರಭಾವಿಗಳು ಬಲೆಗೆ ಬೀಳುವ ಸಾಧ್ಯತೆ ಇದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin