ಮಹಾರಾಷ್ಟ್ರದ ವಿರುದ್ಧ ಗೆಲುವಿನ ದಡದತ್ತ ಕರ್ನಾಟಕದ ಹೆಜ್ಜೆ

ಈ ಸುದ್ದಿಯನ್ನು ಶೇರ್ ಮಾಡಿ

Karnatak-Team

ಮೊಹಾಲಿ, ಡಿ. 9- ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಸೋಲು ಕಂಡಿದ್ದ ಕರ್ನಾಟಕ , ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿದೆ. ಮಹಾರಾಷ್ಟ್ರ ವಿರುದ್ಧದ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 182 ರನ್‍ಗಳ ಬೃಹತ್ ಮುನ್ನಡೆ ಸಾಧಿಸಿರುವ ಕರ್ನಾಟಕ ಮಹಾರಾಷ್ಟ್ರದ ಆರಂಭಿಕ ಆಟಗಾರರನ್ನು ಬಲು ಬೇಗ ಪೆವಿಲಿಯನ್‍ಗೆ ಅಟ್ಟುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ.

ವೇಗಿಗಳ ಕೈಚಳಕ:

182 ರನ್‍ಗಳ ಬೃಹತ್ ಇನ್ನಿಂಗ್ಸ್ ಹಿನ್ನೆಡೆ ಅನುಭವಿಸಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರದ ಆರಂಭಿಕ ಆಟಗಾರರಾದ ಗುಗಲೆ ಹಾಗೂ ಮೊಟ್ವಾನಿ ಕರ್ನಾಟಕದ ವೇಗದ ಬೌಲರ್‍ಗಳ ಎದುರು ರನ್ ಗಳಿಸಲು ಪರದಾಡಿ ತಂಡದ ಮೊತ್ತ 17 ರನ್‍ಗಳಾಗುವಷ್ಟರಲ್ಲಿ ಡಗ್‍ಔಟ್‍ನತ್ತ ಹೆಜ್ಜೆ ಹಾಕಿದರು.
2.5ನೆ ಓವರ್‍ನಲ್ಲಿ ಗುಗ್ಲೆ (8 ರನ್, 1 ಬೌಂಡರಿ) ಅಭಿಮನ್ಯು ಮಿಥುನ್‍ರ ಬೌಲಿಂಗ್‍ನಲ್ಲಿ ಅರ್ಜುನ್ ಹೊಯ್ಸಳಗೆ ಕ್ಯಾಚ್ ನೀಡಿ ಹೊರ ನಡೆದರೆ 3.3 ನೆ ಓವರ್‍ನಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ ಮೋಟ್ವಾನಿ, ವಿನಯ್‍ಕುಮಾರ್‍ರ ಬೌಲಿಂಗ್‍ನಲ್ಲಿ ವಿಕೆಟ್‍ಕೀಪರ್ ಸಿ.ಎಂ.ಗೌತಮ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು.

ನಂತರ ಬಂದ ಸಾಯ್ನಿಕ್ (6 ರನ್) ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲದೆ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ತ್ರಿಪಾಠಿ ಮೊದಲ ಇನ್ನಿಂಗ್ಸ್‍ನಂತೆ ದ್ವಿತೀಯ ಇನ್ನಿಂಗ್ಸ್‍ನಲ್ಲೂ ಶ್ರೀನಾಥ್ ಅರವಿಂದ್‍ರ ಬೌಲಿಂಗ್‍ನಲ್ಲಿ ಕ್ಲೀನ್‍ಬೋಲ್ಡ್ ಆದರು.

ಆಸರೆಯಾದ ಕೇದಾರ್ ಜಾಧವ್:

ಮಹಾರಾಷ್ಟ್ರ ಪಾಳೆಯದಲ್ಲಿ ಒಂದೆಡೆ ಆರಂಭಿಕ ಆಟಗಾರರೆಲ್ಲ ಎರಡು ಅಂಕಿ ದಾಟುವ ಮುನ್ನವೇ ಮೈದಾನದದಿಂದ ಹೊರ ನಡೆದರೆ, ಕ್ರೀಸ್‍ನಲ್ಲಿ ನೆಲೆ ಕಂಡಿರುವ ಕೇದಾರ್ ಜಾಧವ್ ಅವರು ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ಡ್ರಿಂಕ್ಸ್ ವಿರಾಮದ ನಂತರ ಬಿರುಸಿನ ಆಟಕ್ಕೆ ಮುಂದಾದ ಕೇದಾರ್ ಜಾಧವ್ 25 ಎಸೆತಗಳಲ್ಲೆ 51 ರನ್ ಗಳಿಸಿ ಭರವಸೆ ಮೂಡಿಸಿದರು.  ಈ ಜೋಡಿಯು 5 ವಿಕೆಟ್‍ಗೆ 59 ರನ್‍ಗಳ ಜೊತೆಯಾಟ ನೀಡಿದರಾದರೂ ಡೇವಿಡ್ ಮಾಥಸ್ ಖುರಾನಾ(28 ರನ್, 5 ಬೌಂಡರಿ)ರ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಶತಕದ ಅಂಚಿನಲ್ಲಿದ್ದ ಕೇದಾರ್ ಜಾಧವ್(85 ರನ್, 59 ಎಸೆತ,10 ಬೌಂಡರಿ, 2 ಸಿಕ್ಸರ್) ರನ್ನು ಕೂಡ ಡೇವಿಡ್ ಮಾಥಸ್ ಪೆವಿಲಿಯನ್‍ಗೆ ಅಟ್ಟಿದರು.

ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಮಹಾರಾಷ್ಟ್ರ 6 ವಿಕೆಟ್‍ಗಳನ್ನು ಕಳೆದುಕೊಂಡು 156ರನ್‍ಗಳನ್ನು ಗಳಿಸಿದ್ದು ಬಾವನೆ (13 ರನ್, 3 ಬೌಂಡರಿ) ಕ್ರೀಸ್‍ನಲ್ಲಿದ್ದರು.  ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ವಿನಯ್‍ಕುಮಾರ್ ಹಾಗೂ ಶ್ರೀನಾಥ್ ಅರವಿಂದ್ ಅಂತಿಮ ವಿಕೆಟ್‍ಗೆ 37 ರನ್‍ಗಳ ಕಾಣಿಕೆ ನೀಡುವ ಮೂಲಕ ಕರ್ನಾಟಕ ತಂಡವನ್ನು 345 ರನ್‍ಗಳ ಗುರಿ ಮುಟ್ಟಿಸಿದರು. 79 ಎಸೆತಗಳಲ್ಲಿ 9 ಬೌಂಡರಿ ಬಾರಿಸಿದ ನಾಯಕ ವಿನಯ್‍ಕುಮಾರ್ 56 ರನ್ ಗಳಿಸಿ ಅಜೇಯರಾಗಿ ಉಳಿದರೆ, ಶ್ರೀನಾಥ್ ಅರವಿಂದ್ 11 ರನ್ ಗಳಿಸಿ ಖುರಾನಾಗೆ ವಿಕೆಟ್ ಒಪ್ಪಿಸಿದರು.  ಮಹಾರಾಷ್ಟ್ರ ಪರ ಸಂಕ್‍ಲೇಚಾ 3 ವಿಕೆಟ್ ಪಡೆದದರೆ, ಪಿ.ಸಿ.ದಾಂಡೆ, ಸಯ್ಯಾದ್, ಖುರಾನ ತಲಾ 2 ವಿಕೆಟ್, ದುಮಾಲ್ 1 ವಿಕೆಟ್ ಕಬಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin