ಮಹಾಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

shiva-ratri

ನಮ್ಮದು ಹಬ್ಬಗಳ ದೇಶ. ಅನೇಕ ಧರ್ಮಗಳ ಜನ್ಮಭೂಮಿ. ಹಲವು ಭಾಷೆಗಳ ಆಗರ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ, ವಿಶೇಷತೆ ಇದೆ, ಆಧ್ಯಾತ್ಮಿಕ ಹಿನ್ನೆಲೆ ಇದೆ. ಶಿವರಾತ್ರಿ ಹಬ್ಬವು ಪರಮಾತ್ಮ ಶಿವನ ಸತ್ಯ ಪರಿಚಯವನ್ನು ನಮಗೆ ಮಾಡಿಕೊಡುವ ಶಿವರಾತ್ರಿಯ ವಾಸ್ತವಿಕ ಅರ್ಥ ನಮಗೆ ತಿಳಿಸುತ್ತದೆ.   ಇಡೀ ಜಗತ್ತಿನಲ್ಲಿ ಪರಮಾತ್ಮ ಎಂಬ ಶಬ್ದವನ್ನು ಕೇಳದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಆದರೆ, ಪರಮಾತ್ಮ ಶಿವನ ಸತ್ಯ ಪರಿಚಯ ಅಥವಾ ಯಥಾರ್ಥ ಜ್ಞಾನವನ್ನು ಅರಿಯದಿರುವವರು ಬಹಳಷ್ಟು ಜನರಿದ್ದಾರೆ.

ಪರಮಾತ್ಮನ ರೂಪ:

ಯಾವುದೇ ಒಂದು ವಸ್ತುವಿನ ರೂಪವು ನಮಗೆ ಕಾಣಿಸದೇ ಇರಬಹುದು. ಆದರೆ, ಅದರ ಅಸ್ತಿತ್ವವನ್ನು ನಿರೂಪಿಸುವಂತಹ ಗುಣ, ಶಕ್ತಿಯ ಅನುಭವ ನಮಗೆ ಆದಾಗ ನಾವು ಅದನ್ನು ನಂಬುತ್ತೇವೆ. ಇದೇ ರೀತಿ ಪರಮಾತ್ಮನ ಆಕಾರ ಅಥವಾ ರೂಪ ನಮಗೆ ಕಾಣದೆ ಇರಬಹುದು. ಆದರೆ, ಅವನ ಗುಣ-ಶಕ್ತಿಗಳಿಂದ ನಾವು ಅವನ ಅಸ್ತಿತ್ವ ನಂಬುತ್ತಲೇ ಬಂದಿದ್ದೇವೆ. ಪರಮಾತ್ಮನು ದಿವ್ಯ ರೂಪ ಹೊಂದಿದ್ದಾನೆ. ಆ ರೂಪವು ಈ ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ. ಆದ್ದರಿಂದಲೇ ಭಕ್ತರು ಅವನನ್ನು ನಿರಾಕಾರ, ನಿರ್ವಿಕಾರ ಮತ್ತು ನಿರಂಹಕಾರ ಎಂದು ಹಾಡಿ ಹೊಗಳಿದ್ದಾರೆ.  ಆ ಸ್ವರೂಪ ನೋಡಲು ಜ್ಞಾನ-ಚಕ್ಷುಗಳ ಅವಶ್ಯಕತೆ ಇದೆ. ನಿರಾಕಾರ ಎಂಬ ಶಬ್ದವು ಸಾಪೇಕ್ಷವಾಗಿದೆ. ಅನ್ಯ ಆತ್ಮರುಗಳ ದೈಹಿಕ ರೂಪದ ಹೋಲಿಕೆಯಲ್ಲಿ ಈ ಶಬ್ದ ಬಳಸಲಾಗುತ್ತದೆ. ಆತ್ಮರು ಸ್ಥೂಲ ಅಥವಾ ಸೂಕ್ಷ್ಮ ಶರೀರ ಧರಿಸುತ್ತಾರೆ. ಆದರೆ, ಪರಮಾತ್ಮನು ಜನ್ಮ-ಮರಣದಿಂದ ದೂರವಿದ್ದಾನೆ. ಪರಮಾತ್ಮನಿಗೆ ತನ್ನದೆ ಆದ ಯಾವ ಶರೀರವೂ ಇಲ್ಲ. ಹಾಗಾಗಿ ಅವನನ್ನು ನಿರಾಕಾರಿ ಎಂದು ಕರೆಯುತ್ತಾರೆ. ನಿರಾಕಾರನೆಂದರೆ ಅಕಾಯ, ಅವ್ಯಕ್ತ, ಅಶರೀರಿ. ಪರಮಾತ್ಮನು ರೂಪದಿಂದ ದೂರವಿಲ್ಲ, ಅವನ ರೂಪವಾಗಿದೆ ಜ್ಯೋತಿರ್ಬಿಂದು ಸ್ವರೂಪ. ಅಂದರೆ ಅವನು ಜ್ಯೋತಿ ಆಕಾರದಲ್ಲಿದ್ದಾನೆ.

ಪರಮಾತ್ಮನ ಸ್ಮರಣ-ಚಿಹ್ನೆ ಶಿವಲಿಂಗವಾಗಿದೆ:

ಎಲ್ಲಾ ಮಹಾನ್ ವ್ಯಕ್ತಿಗಳ ಸ್ಮೃತಿಗಾಗಿ ಅವರ ಸ್ಮಾರಕಗಳನ್ನು, ಚಿಹ್ನೆಗಳನ್ನು, ಮೂರ್ತಿಗಳನ್ನು ಮತ್ತು ಮಂದಿರಗಳನ್ನು ನಿರ್ಮಿಸುತ್ತಾರೆ. ಆದರೆ, ಜಗತ್ತಿನಲ್ಲಿ ಅತೀ ಹೆಚ್ಚು ಪೂಜೆ ಸಾಮಾನ್ಯವಾಗಿ ಶಿವಲಿಂಗಕ್ಕೆ ಆಗುತ್ತದೆ. ವಿಶ್ವದಲ್ಲಿ ಶಿವಲಿಂಗದ ಪೂಜೆ ನಡೆಯದ ಯಾವುದೆ ದೇಶವಿಲ್ಲ. ಶಿವ ಎಂಬ ಶಬ್ದದ ಅರ್ಥವಾಗಿದೆ ಕಲ್ಯಾಣಕಾರಿ ಮತ್ತು ಲಿಂಗದ ಅರ್ಥ ಪ್ರತಿಮೆ. ಪ್ರಾಚೀನ ಕಾಲದಲ್ಲಿ ಶಿವಲಿಂಗಗಳನ್ನು ವಜ್ರಗಳಿಂದ ಮಾಡಲಾಗುತ್ತಿತ್ತು. ಸೋಮನಾಥ ಪ್ರಸಿದ್ಧ ಮಂದಿರದಲ್ಲಿ ಪ್ರಪ್ರಥಮವಾಗಿ ಜಗತ್ತಿನಲ್ಲಿಯೇ ಸರ್ವೋತ್ತಮ ವಜ್ರವಾದ ಕೊಹಿನೂರ್‍ನಿಂದ ನಿರ್ಮಿಸಿದ ಶಿವಲಿಂಗದ ಸ್ಥಾಪನೆಯಾಗಿತ್ತು. ವಿಭಿನ್ನ ಧರ್ಮಗಳಲ್ಲಿಯೂ ಸಹ ಪರಮಾತ್ಮನನ್ನು ಈ ಆಕಾರದಿಂದಲೇ ಪ್ರಾರ್ಥಿಸುತ್ತಾರೆ. ಜ್ಯೋತಿ ಸ್ವರೂಪ ಪರಮಾತ್ಮನ ಪ್ರತೀಕವಾಗಿ ಮನೆಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ, ಮಂದಿರಗಳಲ್ಲಿ ಮತ್ತು ಗುರುದ್ವಾರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಜ್ಯೋತಿಯನ್ನು ಬೆಳಗಿಸುತ್ತಾರೆ. ಭಾರತದಲ್ಲಿ ಶಿವನ 12 ಅತಿ ಪ್ರಸಿದ್ಧ ಜ್ಯೋತಿ ರ್ಲಿಂಗಗಳಿವೆ. ಇವುಗಳಲ್ಲಿ ಹಿಮಾಲಯದಲ್ಲಿರುವ ಕೇದಾರೇಶ್ವರ ಮತ್ತು ಸೌರಾಷ್ಟ್ರದ ಸೋಮನಾಥ ಮತ್ತು ಮಧ್ಯಪ್ರದೇಶದ ಉಜ್ಜೈನಿ ನಗರದಲ್ಲಿರುವ ಮಹಾಕಾಲೇಶ್ವರ ಮಂದಿರ ಅತಿ ಪ್ರಸಿದ್ಧವಾಗಿವೆ.

ಜಪಾನ್‍ನಲ್ಲಿಯೂ ಬೌದ್ಧ ಧರ್ಮದ ಅನುಯಾಯಿಗಳು ಆಧ್ಯಾತ್ಮಿಕ ಸಾಧನೆ ಮಾಡುವಾಗ ತಮ್ಮ ಎದುರಿಗೆ ಶಿವಲಿಂಗದ ಆಕಾರವುಳ್ಳ ಒಂದು ಕಲ್ಲನ್ನು 3 ಅಡಿ ದೂರ ಮತ್ತು ಎತ್ತರದಲ್ಲಿ ಇಟ್ಟು ಧ್ಯಾನ ಮಾಡುತ್ತಾರೆ. ಇಸ್ರೇಲ್ ಮತ್ತು ಯಹೂದಿಗಳ ದೇಶಗಳಲ್ಲಿಯೂ ಯಹೂದಿಗಳು ಶಪಥ ಗೈಯುವಾಗ ಇಂತಹ ಕಲ್ಲನ್ನು ಸ್ಪರ್ಶಿಸುತ್ತಾರೆ. ಇದಲ್ಲದೆ, ಪ್ರಾಚೀನ ಮತ್ತು ಪ್ರಸಿದ್ಧ ದೇಶವಾದ ಈಜಿಪ್ಟ್‍ನ ಫನೇಶಿಯಾ ನಗರದಲ್ಲಿ, ಇರಾನ್‍ನ ಸಿರಿಯಾ ನಗರದಲ್ಲಿ, ಹ್ಯಾತಿ ದ್ವೀಪದಲ್ಲಿ, ಸುಮಾತ್ರ ಮತ್ತು  ಜಾವ ದ್ವೀಪಗಳಲ್ಲಿ ಶಿವನ ಈ ಸ್ಥೂಲ ಸ್ಮಾರಕಗಳು ಕಂಡು ಬರುತ್ತವೆ. ಇಷ್ಟೇ ಅಲ್ಲದೆ, ಸ್ಕಾಟ್‍ಲ್ಯಾಂಡ್‍ನ ಪ್ರಮುಖ ನಗರವಾದ ಗ್ಲಾಸ್ಗೋ, ಟರ್ಕಿಯ ಟಾಸ್ಕಂಟ್, ವೆಸ್ಟ್‍ಇಂಡೀಸ್‍ನ ಗಿಯಾನಾ, ಶ್ರೀಲಂಕಾ, ಮಾರಿಷಿಯಸ್, ಮಡಗಾಸ್ಕರ್‍ನಲ್ಲಿ ಶಿವಲಿಂಗದ ಪೂಜೆಯಾಗುತ್ತದೆ ಎಂದು ಹೇಳಲಾಗುತ್ತದೆ.  ಅನೇಕ ಧರ್ಮಗಳಲ್ಲಿ ಉಂಟಾದ ಮತಭೇದದ ಕಾರಣ ಇಂದು ಶಿವಲಿಂಗದ ಪೂಜೆಯೂ ಅನ್ಯ ದೇಶಗಳಲ್ಲಿ ಆಗದೆ ಇರಬಹುದು. ಆದರೆ, ಭಾರತದಲ್ಲಿ ಶಿವನ ಪೂಜೆ ಅತಿಪ್ರಿಯವಾದುದಾಗಿದೆ. ಶ್ರೀ ರಾಮಚಂದ್ರನು ರಾಮೇಶ್ವರದಲ್ಲಿ, ಶ್ರೀಕೃಷ್ಣನು ಗೋಪೇಶ್ವರದಲ್ಲಿ ಮತ್ತು ಅನ್ಯ ದೇವಿ-ದೇವತೆಗಳು ಈಶ್ವರನನ್ನು ಆರಾಸಿರುವಂತೆ ತೋರಿಸಲಾಗಿದೆ. ಆದ್ದರಿಂದ ಪರಮಾತ್ಮ ಶಿವನು ಸರ್ವ ಆತ್ಮರ ಪರಮ ಪಿತನಾಗಿದ್ದು, ಜ್ಯೋತಿರ್ಬಿಂದು ಸ್ವರೂಪನಾಗಿದ್ದಾನೆ.

ರಾತ್ರಿ ಎಂಬ ಶಬ್ದದ ಪ್ರತೀಕಾರ್ಥ:

ಶಿವನೊಂದಿಗೆ ರಾತ್ರಿ ಎಂಬ ಶಬ್ದವು ಸೇರಿದೆ. ಇಲ್ಲಿ ರಾತ್ರಿ ಎಂಬುದು ನಾವು ತಿಳಿದುಕೊಂಡಂತೆ ಪ್ರತಿನಿತ್ಯ ಘಟಿಸುವ ಪ್ರಾಕೃತಿಕ ಪರಿವರ್ತನೆಯಲ್ಲ. ಅಜ್ಞಾನ-ಅಂಧಕಾರದ ಪ್ರತೀಕಾರ್ಥವಾಗಿ ರಾತ್ರಿ ಎಂಬ ಶಬ್ದ ಸೇರಿಸಲಾಗಿದೆ. ಇಂದು ಮನುಷ್ಯನು ಪುಸ್ತಕದ ಜ್ಞಾನ ಅರಿತು ಅಹಂಕಾರಿಯಾಗಿದ್ದಾನೆ. ಆದರೆ, ತನ್ನನ್ನು ತಾನು ಅರಿತಿಲ್ಲ. ಬದುಕಿನ ಯಥಾರ್ಥ ಜ್ಞಾನ ತಿಳಿದಿಲ್ಲ, ಹಾಗಾಗಿ ಎಷ್ಟೇ ಪಂಡಿತನಾಗಿದ್ದರೂ ಅಜ್ಞಾನಿಯೇ. ಕತ್ತಲಲ್ಲಿ ಯಾವುದೇ ವಸ್ತುವೂ ಕಾಣುವುದಿಲ್ಲ. ಇದೇ ರೀತಿ ಅಜ್ಞಾನದ ಕತ್ತಲೆಯಲ್ಲಿ ಮುಳುಗಿರುವ ಮನುಷ್ಯಾತ್ಮರಿಗೆ ಪರಮಾತ್ಮ ಶಿವನ ಸತ್ಯ ಪರಿಚಯ ಇರುವುದಿಲ್ಲ ಹಾಗೂ ಆತ್ಮ-ಜ್ಞಾನವೂ ಇರುವುದಿಲ್ಲ.  ಇಂತಹ ಘೋರ ಅಜ್ಞಾನ-ಅಂಧಕಾರದ ಸಮಯ ದಲ್ಲಿ ಪರಮಾತ್ಮ ಶಿವನು ಈ ಧರೆಗೆ ಅವತರಿಸುತ್ತಾನೆ. ಈಶ್ವರೀಯ ವಿಶ್ವ ವಿದ್ಯಾಲಯ ಸ್ಥಾಪಿಸಿ ಸರ್ವ ಮನುಷ್ಯಾತ್ಮರಿಗೆ ಸಹಜ ಜ್ಞಾನ ಮತ್ತು ರಾಜಯೋಗ ಕಲಿಸಿ ಮಾನವರನ್ನು ದೇವ ಮಾನವರನ್ನಾಗಿ ಮಾಡುತ್ತಾನೆ. ಈ ದಿವ್ಯ ಕರ್ತವ್ಯದ ಪ್ರತೀಕಾರ್ಥವಾಗಿ ನಾವು ಪ್ರತಿ ವರ್ಷ ಶಿವರಾತ್ರಿ ಆಚರಿಸುತ್ತೇವೆ.

ಉಪವಾಸ ಮತ್ತು  ಜಾಗರಣೆಗಳ ಅರ್ಥ:

ಶಿವರಾತ್ರಿಯಂದು ಭಕ್ತರು ಎರಡು ವಿಶೇಷ ರೀತಿಯ ಆಚರಣೆಗಳನ್ನು ಮಾಡುತ್ತಾರೆ. ಉಪವಾಸ ಮತ್ತು  ಜಾಗರಣೆ. ಸಾಮಾನ್ಯವಾಗಿ ಬಹಳಷ್ಟು ಹಬ್ಬಗಳಲ್ಲಿ ಭಕ್ತರು ವಿಶೇಷ ರೀತಿಯ ಭಕ್ಷ್ಯ-ಭೋಜನಗಳನ್ನು ಸವಿದರೆ, ಶಿವರಾತ್ರಿಯಂದು ಮಾತ್ರ ಉಪವಾಸ ವ್ರತ ಕೈಗೊಳ್ಳುತ್ತಾರೆ. ಉಪ ಎಂದರೆ ಹತ್ತಿರ ಎಂದರ್ಥ. ವಾಸ ಎಂದರೆ ನೆಲೆಸು ಎಂದರ್ಥ. ಅಂದರೆ ಹತ್ತಿರದಲ್ಲಿ ವಾಸಿಸು, ನೆಲಸು ಎಂದರ್ಥ. ದೈಹಿಕ ಆರೋಗ್ಯಕ್ಕಾಗಿ ಉಪವಾಸ ಕೈಗೊಳ್ಳುವುದು ಬೇರೆ. ಆದರೆ, ಉಪವಾಸದ ಯಥಾರ್ಥ ಅರ್ಥ ಅರಿಯದೆ ಕೇವಲ ಆಚರಣೆಗಾಗಿ ಉಪವಾಸ ಮಾಡುವುದೆಂದರೆ ದೇಹವನ್ನು ದಂಡಿಸಿದಂತೆ. ದೇಹಕ್ಕೆ ಉಪವಾಸ ಹಾಕುವುದರಿಂದ ಮನಸ್ಸು ಆಹಾರದೆಡೆಗೆ ಹರಿದಾಡಬಹುದು. ಹಾಗಾಗಿ ಸದಾ ಮನಸ್ಸು- ಬುದ್ಧಿಯನ್ನು ಶಿವನಲ್ಲಿ ನೆಲೆಸುತ್ತ ಸದಾ ಅವನ ನೆನಪಿನಲ್ಲಿರುವುದೇ ನಿಜ ಉಪವಾಸ.

ಜಾಗರಣೆಯು ಆತ್ಮ- ಜಾಗೃತಿಯ ಪ್ರತೀಕವಾಗಿದೆ. ಆತ್ಮ- ಜಾಗೃತಿ ಹೊಂದದೆ ತಮ್ಮನ್ನು ತಾವು ಈ ನಶ್ವರ ದೇಹವೆಂದು ತಿಳಿದು ದೇಹಾಂಕಾರಿಗಳಾದಾಗ ಮೃತ್ಯುವಿನ ಭಯ ಸಹಜ. ಇಲ್ಲಿ ಪರಮಾತ್ಮನು ಆತ್ಮ-ಜ್ಞಾನ ನೀಡಿ ಆಧ್ಯಾತ್ಮಿಕ  ಜಾಗೃತಿ ಮೂಡಿಸುತ್ತಾನೆ. ಭಕ್ತರು ಶಿವಮಂದಿರಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ರಾತ್ರಿಯೆಲ್ಲ ಶಿವ ನಾಮ ಸ್ಮರಣೆ, ವಿಶೇಷ ಪೂಜೆ-ಸತ್ಕಾರ್ಯಗಳ ಮೂಲಕ  ಜಾಗರಣೆ ಮಾಡಬಹುದು. ಆದರೆ, ಆತ್ಮ- ಜಾಗೃತಿ ಮತ್ತು ಆಧ್ಯಾತ್ಮಿಕ  ಜಾಗೃತಿ ಹೊಂದದೆ ಸ್ಥೂಲ ಆಚರಣೆಗಳನ್ನು ಮಾಡಿದರೆ ಪ್ರಯೋಜನವಿಲ್ಲ. ದೇಹಕ್ಕೆ ನಿದ್ದೆ ಬೇಕೇ ಬೇಕು. ಹಾಗಾಗಿ ಸ್ಥೂಲ  ಜಾಗರಣೆ ಮಾಡದೆ ಆತ್ಮ- ಜಾಗೃತಿ ಹೊಂದುತ್ತ ಶಿವನನ್ನು ನೆನೆದರೆ ಮುಕ್ತಿ-ಜೀವನ್ಮುಕ್ತಿಗಳು ಸಹಜವಾಗಿ ಲಭಿಸುವುವು.

-ಪ್ರ ಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ
ವಿಶ್ವ ವಿದ್ಯಾಲಯ, ದಾವಣಗೆರೆ

Facebook Comments

Sri Raghav

Admin