ಮಹಿಳಾ ಅಭಿವೃದ್ಧಿಗೆ ಮುನ್ನುಡಿ ಬರೆದ ವೀರೇಂದ್ರ ಹೆಗ್ಗಡೆ

ಈ ಸುದ್ದಿಯನ್ನು ಶೇರ್ ಮಾಡಿ

8
ಬಾದಾಮಿ,ಫೆ.23- ಬಡ ಕುಟುಂಬಗಳ ಸರ್ವತೋಮುಖ ಬೆಳವಣಿಗೆ ಹಾಗೂ ಸ್ವಾವಲಂಭಿ ಬದುಕಿನ ಸಲುವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹುಟ್ಟುಹಾಕಿದ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ 3.59 ಲಕ್ಷ ಸ್ವ-ಸಹಾಯ ಸಂಘಗಳನ್ನು ರಚಿಸಲಾಗಿದ್ದು, ಒಟ್ಟು 37.22 ಲಕ್ಷ ಕುಟುಂಬಗಳು ಸಂಘದ ವ್ಯಾಪ್ತಿಯಲ್ಲಿದ್ದು, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಿ, ಅವರ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಹೇಳಿದರು.ಕೆರೂರ ಪಟ್ಟಣದ ಬಸಪ್ಪನವರು ನಿಲುಗಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಗೊಂದು ಬ್ಯಾಂಕ್‍ನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಆ ಮೂಲಕ ಸಾಲದ ಸೌಲಭ್ಯಗಳನ್ನು ಒದಗಿಸಿ ಸಾಲವನ್ನು ಮಹಿಳೆಯರು ಆದಾಯ ತರುವ ಉದ್ಯೋಗಕ್ಕೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ಯೋಜನಾಧಿಕಾರಿ ಓಮು ಮರಾಠೆ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ಪ್ರಜಾಪ್ರಭುತ್ವದ ಮಾದರಿಯಲ್ಲಿ ತಾಲೂಕಿನಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟಗಳನ್ನು ರಚಿಸಲಾಗಿದೆ ಎಂದರು.ಮಾಜಿ ಜಿಪಂ ಸದಸ್ಯ ಡಾ. ಎಂ.ಜಿ. ಕಿತ್ತಲಿ ಮಾತನಾಡಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪ್ರಗತಿ ಬಂಧು, ಪರಿಶುದ್ಧ ಕುಡಿಯುವ ನೀರು, ಕೃಷಿ, ಮಾಸಾಶನ, ಶೌಚಾಲಯ, ನೈರ್ಮಲ್ಯ, ಮದ್ಯವರ್ಜನ ಶಿಬಿರ ಹೀಗೆ ಹತ್ತು ಹಲವಾರು ಯೋಜನೆಗಳ ಮೂಲಕ ಗ್ರಾಮೀಣ ಬಡ ಹೆಣ್ಣು ಮಕ್ಕಳಿಗೆ ಆರ್ಥಿಕ ಬಲವನ್ನು ನೀಡಿ, ಬೇರು ಮಟ್ಟದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.ಪಪಂ ಅಧ್ಯಕ್ಷ ಸದಾನಂದ ಮದಿ ಮಾತನಾಡಿ, ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರ ಮಹಿಳಾ ಪರವಾದ ಕಾಳಜಿಯಿಂದಾಗಿ ಕುಟುಂಬಗಳು ಆರ್ಥಿಕವಾಗಿ ಸುಧಾರಣೆಗೊಳ್ಳುತ್ತಿವೆ ಎಂದರು.

ಡಾ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣಗೊಳ್ಳುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಉದ್ದೇಶವು ಸಫಲಗೊಂಡಿದೆ ಎಂದರು.ಸಮಾರಂಭದಲ್ಲಿ ಈರಣ್ಣ ಪತ್ತಾರ, ಆರ್.ಎಸ್. ನಿಡೋಣಿ, ಕನಕಪ್ಪ ಮನ್ನೂರ, ಯಲ್ಲಪ್ಪ ಕಿತ್ತಲಿ, ಬಿ.ಎಂ. ಡಾಂಗೆ, ಮೇಲ್ವಿಚಾರಕ ರೇಖಾ ಭಜಂತ್ರಿ, ಮಂಜುನಾಥ ಎಚ್.ಎಲ್. ಮೃತ್ಯೂಂಜಯ ಪಿ.ಬಿ, ಮಂಜುನಾಥ ಅರಳಿಸಿಮಿ ಮುಂತಾದವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin