ಮಹಿಳಾ ಕಾರ್ಪೊರೇಟರ್ಗಳ ಮೇಲೆ ದೌರ್ಜನ್ಯಕ್ಕೆ ಶಾಸಕ ಮುನಿರತ್ನ ವಿರುದ್ಧ ಕೆರಳಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

BBMP-Memb

ಬೆಂಗಳೂರು, ಆ.26- ಮಹಿಳಾ ಕಾರ್ಪೊರೇಟರ್ಗಳ ಮೇಲೆ ಶಾಸಕ ಮುನಿರತ್ನ ಹಾಗೂ ಬೆಂಬಲಿಗರು ದೌರ್ಜನ್ಯ, ಹಲ್ಲೆ, ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಸಭೆಯ ಹೊರಗೂ ಹಾಗೂ ಒಳಗೂ ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮ ಪಾಲಿಕೆ ಆವರಣ ಗೊಂದಲದ ಗೂಡಾಯಿತು.  ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಬಿಜೆಪಿ ಸದಸ್ಯರು ಧರಣಿ ಹಾಗೂ ಸತ್ಯಾಗ್ರಹ ನಡೆಸಿದ ಪರಿಣಾಮ ಗದ್ದಲ-ಕೋಲಾಹಲ ಉಂಟಾಯಿತು. ಸಭೆಯ ಆರಂಭದಲ್ಲಿ ಶಾಸಕ ಮುನಿರತ್ನ ಅವರ ಧೋರಣೆಯನ್ನು ಖಂಡಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಮಹಿಳಾ ಕಾರ್ಪೋರೇಟರ್ಗಳಿಗೆ ಬೆದರಿಕೆ ಹಾಕಿ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡದ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗದ್ದಲವೆಬ್ಬಿಸಿದರು. ಈ ಸಂದರ್ಭದಲ್ಲಿ ಮೇಯರ್ ಮಂಜುನಾಥರೆಡ್ಡಿ ಕೆಲ ಕಾಲ ಸಭೆಯನ್ನು ಮುಂದೂಡಿದರು.  ಇದಕ್ಕೂ ಮುನ್ನ ಬಿಬಿಎಂಪಿ ಹೊರ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಮುನಿರತ್ನ ಹಾಗೂ ಅವರ ಬೆಂಬಲಿಗರ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಬಿಬಿಎಂಪಿ ಬಳಿಯ ಕೆಂಪೇಗೌಡ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.

ಜೆಪಿಪಾರ್ಕ್ ವಾರ್ಡ್ ಸದಸ್ಯೆ ಮಮತಾ ವಾಸುದೇವ್ ಸೇರಿದಂತೆ ಇಲ್ಲಿನ ಮಹಿಳಾ ಕಾರ್ಪೊರೇಟರ್ಗಳ ಮೇಲೆ ಮಾನಸಿಕ ಹಿಂಸೆ, ಕ್ಷೇತ್ರದ ಕೆಲಸಗಳನ್ನು ಮಾಡಲು ಅವಕಾಶ ನೀಡದಂತೆ ಶಾಸಕರು ಹಾಗೂ ಅವರ ಬೆಂಬಲಿಗರು ವರ್ತಿಸುತ್ತಿದ್ದಾರೆ. ಬಿಜೆಪಿ ಮಹಿಳಾ ಕಾರ್ಪೊರೇಟರ್ಗಳ ಮೇಲೆ ಹಲ್ಲೆ ಖಂಡಿಸಿ ಈಗಾಗಲೇ ಹಲವು ಪ್ರತಿಭಟನೆಗಳನ್ನು ಮಾಡಿದ್ದೇವೆ. ಬಿಬಿಎಂಪಿ ಸಭೆಯಲ್ಲಿ ಈ ಬಗ್ಗೆ ಧರಣಿ ನಡೆಸಲು ಕೂಡ ನಿರ್ಧರಿಸಿದ್ದೆವು ಎಂದು ಪ್ರತಿಭಟನಾ ನಿರತ ಮುಖಂಡರು ತಿಳಿಸಿದರು. ಜೆಪಿಪಾರ್ಕ್ ವಾರ್ಡ್ ಸದಸ್ಯೆ ಮಮತಾ ವಾಸುದೇವ್ ಮಾತನಾಡಿ, ನನ್ನ ವಾರ್ಡ್ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಿಡದೆ ಮುನಿರತ್ನ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ವಾರ್ಡ್ ಕಾಮಗಾರಿ ಬಗ್ಗೆ ಸಿಬಿಐ ತನಿಖೆ ಎದುರಿಸಲು ಸಿದ್ಧನಾಗಿದ್ದೇನೆ. ಶಾಸಕರಾದ ನೀವು ಸಿಬಿಐ ತನಿಖೆ ಎದುರಿಸಲು ಸಿದ್ಧವೆ ಎಂದು ಸವಾಲು ಹಾಕಿದರು.  ಶಾಸಕರಾದ ಮುನಿರತ್ನ, ಬೈರತಿ ಬಸವರಾಜ, ಎಸ್.ಟಿ.ಸೋಮಶೇಖರ್ ಕೂಡ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು. ಆರ್ಆರ್ನಗರ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿವೆ. ಪೊಲೀಸರು ಪಕ್ಷಪಾತ ನಡೆಸುತ್ತಿದ್ದಾರೆ. ಅಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಮ್ಮ ಪಕ್ಷದ ಸದಸ್ಯೆ ಮಮತಾ ಅವರಿಗೆ ಯಾವುದೇ ತೊಂದರೆ ಯಾದರೂ ಶಾಸಕ ಮುನಿರತ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರೇ ನೇರ ಕಾರಣ ಎಂದು ಆರೋಪಿಸಿದರು.  ಪ್ರತಿಭಟನೆಯಲ್ಲಿ ಶಾಸಕ ಮುನಿರಾಜು, ಮಾಜಿ ಮೇಯರ್ ಶಾಂತಕುಮಾರಿ, ನಗರ ಬಿಜೆಪಿ ಮುಖಂಡರು, ಬಿಜೆಪಿ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin