ಮಹಿಳಾ ಪೊಲೀಸರ ಗಸ್ತು ಆರಂಭಿಸಲು ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಮಾ.24-ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳಂತಹ ಪ್ರಕರಣಗಳನ್ನು ಹತ್ತಿಕ್ಕಲು ಮಹಿಳಾ ಪೊಲೀಸರ ಗಸ್ತು ಆರಂಭಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಹಲಸೂರು ಗೇಟ್ ಠಾಣೆ ಆವರಣದಿಂದ ಶಿವಾಜಿನಗರ ಠಾಣೆ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಪೂರ್ವವಲಯದ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಚಿವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮೊಬೈಲ್ ಆ್ಯಪ್‍ಗಳನ್ನು ಬಿಡುಗಡೆ ಮಾಡಿದ್ದು, ಆ್ಯಪ್ ಬಳಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ನಗರದಲ್ಲಿ ಎರಡು ಮಹಿಳಾ ಪೊಲೀಸ್ ಠಾಣೆಗಳಿದ್ದರೂ ಎರಡೂ ಪಶ್ಚಿಮ ವಲಯದಲ್ಲಿದ್ದ ಕಾರಣ ಹಲಸೂರು ಗೇಟ್ ಠಾಣೆ ಆವರಣದಲ್ಲಿದ್ದ ಮಹಿಳಾ ಠಾಣೆಯನ್ನು ಪೂರ್ವವಲಯದ ಶಿವಾಜಿನಗರ ಠಾಣೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ನಾಲ್ಕು ವಿಭಾಗಗಳಿಗೆ ಒಂದರಂತೆ ಮಹಿಳಾ ಪೊಲೀಸ್ ಠಾಣೆಯನ್ನು ವಿಂಗಡಿಸಲಾಗಿದ್ದು, ಶಿವಾಜಿ ನಗರವು 4 ವಿಭಾಗಗಳಿಗೆ ಹತ್ತಿರವಾಗಿರುವುದರಿಂದ ಅಲ್ಲಿಗೆ ಮಹಿಳಾ ಠಾಣೆಯನ್ನು ವರ್ಗಾಯಿಸಲಾಗಿದೆ. ಶಿವಾಜಿ ನಗರ ಠಾಣೆಯಲ್ಲಿ ತಾತ್ಕಾಲಿಕವಾಗಿ ಆರಂಭಗೊಂಡಿರುವ ಮಹಿಳಾ ಠಾಣೆಯನ್ನು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡಕ್ಕೆ ವರ್ಗಾಯಿಸ ಲಾಗುವುದು ಎಂದು ಹೇಳಿದರು.  ರಾಜ್ಯದಲ್ಲಿ ರೋಮಿಯೋ ನಿಗ್ರಹ ದಳದ ಸ್ಥಾಪನೆ ಅಗತ್ಯವಿಲ್ಲ. ಉತ್ತರಪ್ರದೇಶದಂತೆ ರಾಜ್ಯದಲ್ಲಿ ರೋಮಿಯೋಗಳ ಕಾಟ ಹೆಚ್ಚಾದರೆ ಅಲ್ಲಿನ ರೋಮಿಯೋ ನಿಗ್ರಹದಳಕ್ಕಿಂತ ಹೆಚ್ಚು ಶಕ್ತಿಯುತವಾದ ದಳವನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಮಹಿಳೆ ಮತ್ತು ಮಕ್ಕಳಿಗೆ ಹೆಚ್ಚು ಭದ್ರತೆ ನೀಡುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳನ್ನು ಆ ಠಾಣೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಅಜಯ್ ಹಿಲೋರಿ, ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಅಂಜುಮಾಲ ನಾಯಕ್ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin