ಮಹಿಳೆಗೆ ಚಾಕುವಿನಿಂದ ಬೆದರಿಸಿ ಸರ-ಓಲೆ ದೋಚಿದ ಕಳ್ಳ
ತುಮಕೂರು,ಸೆ.9- ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಸರಗಳ್ಳತನ ಪ್ರಕರಣಗಳು ಇದೀಗ ಹಳ್ಳಿಗಳಲ್ಲೂ ವ್ಯಾಪಿಸಿದ್ದು, ನಿನ್ನೆ ರಾತ್ರಿ ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಮಾಂಗಲ್ಯ ಸರ ಹಾಗೂ ಓಲೆಯನ್ನು ದೋಚಿ ಪರಾರಿಯಾಗಿದ್ದಾರೆ. ಮಲಚೆಗೇರೆ ಗ್ರಾಮದ ಶಿವಮ್ಮ ಒಡವೆ ಕಳೆದುಕೊಂಡ ಮಹಿಳೆ. ಶಿವಮ್ಮ-ಸಿದ್ದಲಿಂಗಯ್ಯ ದಂಪತಿ ಭೀಮಾಸಾಗರದ ಬಳಿ ಇರುವ ತೋಟದ ಮನೆಯಲ್ಲಿ ವಾಸವಾಗಿದ್ದರು. ಇವರ ಮನೆ ಸಮೀಪ ಇರುವ ಬೀದಿದೀಪವನ್ನು ರಾತ್ರಿ 10 ಗಂಟೆಯಾದರೂ ಹಾಕದೇ ಇರುವುದರಿಂದ ಲೈಟ್ ಹಾಕಲೆಂದು ಶಿವಮ್ಮ ತೆರಳಿದ್ದರು.
ಲೈಟ್ ಹಾಕಿ ಹಿಂದಿರುಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿ ಶಿವಮ್ಮರಿಗೆ ಚಾಕು ತೋರಿಸಿ ಓಲೆ ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ಅವರನ್ನು ನೂಕಿ ಪರಾರಿಯಾಗಿದ್ದು, ನೂಕಿದ ರಭಸಕ್ಕೆ ಶಿವಮ್ಮಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿವಮ್ಮ ಅವರು ಕೋಳಾಲ ಠಾಣೆಗೆ ದೂರು ನೀಡಿದ್ದು , ಸಬ್ಇನ್ಸ್ಪೆಕ್ಟರ್ ಸಂತೋಷ್ ಪ್ರಕರಣ ದಾಖಲಿಸಿಕೊಂಡು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
► Follow us on – Facebook / Twitter / Google+