ಮಹಿಳೆಯರು ಮತ್ತು ಮಕ್ಕಳಿಗಾಗಿ ‘ಇಂದಿರಾ ಸಾರಿಗೆ’ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Indira-Bus--01

ಬೆಂಗಳೂರು, ನ.4-ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಇಂದಿರಾ ಸಾರಿಗೆ ಜಾರಿಗೊಳಿಸುತ್ತೇವೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು. ನಾಡಗೌಡ ಕೆಂಪೇಗೌಡ ಬಸ್ ನಿಲ್ದಾಣದ ಆವರಣದಲ್ಲಿ ಬಿಎಂಟಿಸಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ 94ನೇ ಬಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ಭಯ ಯೋಜನೆಯಡಿ ಸಂಗ್ರಹವಾಗಿರುವ ಹಣವನ್ನು ಮಹಿಳಾ ಸಬಲೀಕರಣಕ್ಕಾಗಿ ಉಪಯೋಗಿಸುತ್ತೇವೆ.  94ನೇ ಬಸ್ ದಿನಾಚರಣೆಯನ್ನು ವಿಶೇಷವಾಗಿ ಮಹಿಳಾ ಪ್ರಯಾಣಿಕರ ಹಿತದೃಷ್ಟಿಯಿಂದ ಸುರಕ್ಷತೆಗೆ ಸಂಬಂಧಿಸಿದಂತೆ ಆಚರಿಸಲಾಗುತ್ತಿದೆ. ನಿರ್ವಾಹಕ ಮಹಿಳೆಯರನ್ನು ಸದೃಢವಾಗಿಸಿ ಅವರಿಗೆ ತರಬೇತಿ ನೀಡಿ ಚಾಲಕಿಯರಾಗಿಯೂ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ಮತ್ತು ಮಹಿಳೆಯರಿಗೆ ವಾಹನ ಚಾಲನ ತರಬೇತಿ ಮತ್ತು ಲೈಸೆನ್‍ಗಳನ್ನು ನೀಡಲಾಗುವುದು. ಮಹಿಳೆಯರ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಸಂಸ್ಥೆಯ ಬಸ್‍ಗಳಲ್ಲಿ ಈವರೆಗೂ 850ಕ್ಕೂ ಹೆಚ್ಚು ಬಸ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಇನ್ನುಳಿದೆಲ್ಲಾ ಬಸ್‍ಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಕೆ ಪ್ರಗತಿಯಲ್ಲಿದೆ ಎಂದು ಹೇಳಿದರು.  ಮಹಿಳಾ ಪ್ರಯಾಣಿಕ ಸುರಕ್ಷತೆಗಾಗಿ ಮೊಬೈಲ್ ಅಪ್ಲಿಕೇಷನ್ ಹಾಗೂ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಗಳ ನಿರ್ಮಾಣ, ಸಾರಥಿ ವಾಹನಗಳಲ್ಲಿ ಮಹಿಳಾ ಸಿಬ್ಬಂದಿಗಳನ್ನು ಹೆಚ್ಚಾಗಿ ನಿಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.
ನಗರದಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ 16 ಆಸನಗಳನ್ನು ಬಸ್‍ನಲ್ಲಿ ಮೀಸಲಿರಿಸಲಾಗಿದೆ. ಈ ಜಾಗದಲ್ಲಿ ಪುರುಷರು ಕುಳಿತುಕೊಂಡರೆ 100 ರೂ. ದಂಡ ವಿಧಿಸುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಬಸವೇಶ್ವರನಗರದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನು ಹೆಚ್ಚು ಬಸ್ ಹಾಗೂ ಮೆಟ್ರೊ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದರು.
ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರಿಗೆ ಚಿಕಿತ್ಸಾ ಟ್ರಾನ್ಸಿಕ್ ಕ್ಲಿನಿಕ್ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.  ಬಿಎಂಟಿಸಿ ಸಂಸ್ಥೆ ರಾಷ್ಟ್ರೀಯ ಅತ್ಯುತ್ತಮ ಸಾರಿಗೆ ಸಂಸ್ಥೆಯಾಗಿದ್ದು , 106 ಪ್ರಶಸ್ತಿ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಈ ಸಂಸ್ಥೆ ಜನಸ್ನೇಹಿ ಸಾರಿಗೆ ಆಗಬೇಕು. ಸಂಸ್ಥೆಯು ಉನ್ನತೀಕರಣಗೊಳಿಸಲು ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಬಸ್ ಸೌಲಭ್ಯದ ಬಗ್ಗೆ ಪ್ರಯಾಣಿಕರಿಗೆ ತಿಳಿಸಿಕೊಡುವ ಹಿನ್ನೆಲೆಯಲ್ಲಿ ಬಸ್ ಬಂತಣ್ಣೊ ಬಸ್ ನಾಟಕ ಪ್ರದರ್ಶನವನ್ನು ಮಾಡಲಾಯಿತು. ಬಸ್‍ನಲ್ಲಿ ಯಾವುದೇ ರೀತಿಯ ತೊಂದರೆಯಾದರೆ ಯಾವುದೇ ಸಮಯದಲ್ಲಾದರೂ ಸಹಾಯವಾಣಿ ಸಂಖ್ಯೆ 1800-4251-663 ಕರೆ ಮಾಡಬಹುದು ಹಾಗೂ ಇಮೇಲ್ಗೆ complaints@mybmtc.com ದೂರು ಸಲ್ಲಿಸಬಹುದು.  ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್ ಯಾದವ್, ಉಪಾಧ್ಯಕ್ಷ ಗೋವಿಂದರಾಜು, ನಟ ಅನೂಪ್ ರೇವಣ್ಣ , ನಟಿ ಕಾರುಣ್ಯರಾಮ್ ಮುಂತಾದವರು ಉಪಸ್ಥಿತರಿದ್ದರು.

Facebook Comments

Sri Raghav

Admin