ಮಹಿಳೆಯ 20 ಗ್ರಾಂ ಚಿನ್ನದ ಸರ ಅಪಹರಣ
ಮೈಸೂರು, ಸೆ.6-ಮಹಿಳೆಯನ್ನು ಹಿಂಬಾಲಿಸಿದ ಸರಗಳ್ಳರು ಸರ ಎಗರಿಸಲು ಕೊರಳಿಗೆ ಕೈ ಹಾಕುತ್ತಿದ್ದಂತೆ ಎಚ್ಚೆತ್ತ ಮಹಿಳೆ ಬಿಗಿಯಾಗಿ ಸರ ಹಿಡಿದುಕೊಂಡರಾದರೂ 60 ಗ್ರಾಂ ಪೈಕಿ 20 ಗ್ರಾಂ ಸರ ಕಳ್ಳರ ಪಾಲಾಗಿರುವ ಘಟನೆ ನಜರ್ಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ 8.30ರ ಸಂದರ್ಭದಲ್ಲಿ ನಿರ್ಮಲಾ ಎಂಬುವರು ಮೊಸರು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ, ಈಕೆಯನ್ನು ಪಲ್ಸರ್ ಬೈಕ್ನಲ್ಲಿ ಹಿಂಬಾಲಿಸಿದ ಕಳ್ಳರು ಭವಾನಿ ಸ್ಟ್ರೀಟ್ ಬಳಿ ಆಕೆಯ ಕೊರಳಿಗೆ ಕೈ ಹಾಕಿ ಸರವನ್ನು ಎಳೆದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ನಿರ್ಮಲಾ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೂ 60 ಗ್ರಾಂ ಚಿನ್ನದ ಸರದಲ್ಲಿ 20ಗ್ರಾಂನಷ್ಟು ಸರ ಕಳ್ಳರ ಪಾಲಾಗಿದೆ. ಸರ ಕಸಿದ ಕಳ್ಳರು ಕೂಡಲೇ ಬೈಕ್ನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ನಜರ್ಬಾದ್ ಠಾಣೆಗೆ ನಿರ್ಮಲಾ ದೂರು ನೀಡಿದ್ದು, ಕಳ್ಳರು ಬಂದಿದ್ದ ಬೈಕ್ ಮಹಾರಾಷ್ಟ್ರ ನಾಮಫಲಕದ್ದಾಗಿತ್ತೆಂದು ಅವರು ತಿಳಿಸಿದ್ದಾರೆ.
► Follow us on – Facebook / Twitter / Google+