ಮಹಿಳೆ ಬರ್ಬರ ಕೊಲೆ ಮಾಡಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

tumkur-arreset

ತುಮಕೂರು,ಆ.24-ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ನೀಲಗಿರಿ ತೋಪಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಪನ್ನಸಂದ್ರ ಗ್ರಾಮದ ನಾರಾಯಣಸ್ವಾಮಿ ಅವರ ಪತ್ನಿ ವಿಜಯಲಕ್ಷ್ಮಿಯನ್ನು ನಿನ್ನೆ ನೀಲಗಿರಿ ತೋಪಿನ ಬಳಿ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ ಅಪ್ರಾಪ್ತ ಯುವಕನನ್ನು ಹೆಬ್ಬೂರು ಠಾಣೆ ಎಸ್ಪಿ ಕಿರಣ್‌ಕುಮಾರ್ ರೆಡ್ಡಿ ನೇತೃತ್ವದಲ್ಲಿ ರಚಿಸಿದ್ದ ತಂಡ ಇಂದು ಬೆಳಗ್ಗೆ ಬಂಧಿಸಿದೆ.  ಬಂಧಿತ ಆರೋಪಿ ಹಲವಾರು ಬಾರಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ ನೀಡುತ್ತಿದುದ್ದಲ್ಲದೆ ನಿನ್ನೆಯೂ ಸಹ ಆಕೆ ದನ ಮೇಯಿಸಿಕೊಂಡು ಹಿಂದಿರುಗುವಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಕೂಗಿಕೊಂಡು ರಂಪ ಮಾಡಿದ್ದರಿಂದ ಆಕೆಯನ್ನು ಗುದ್ದಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಲಕ್ಷ್ಮಿ ನಿನ್ನೆ ಬೆಳಗ್ಗೆ ಗಂಡ ಹಾಗೂ ಮಕ್ಕಳು ಕೆಲಸಕ್ಕೆ ಹಾಗೂ ಶಾಲೆಗೆ ತೆರಳಿದ ಮೇಲೆ ಸುಮಾರು 10 ಗಂಟೆಯಲ್ಲಿ ದನ ಮೇಯಿಸಲು ಮನೆಯಿಂದ ಹೊರಟವರು. ಸಂಜೆಯಾದರೂ ಹಿಂದಿರುಗದೆ ಇದುದ್ದರಿಂದ ಆತಂಕಗೊಂಡ ಪತಿ ಗ್ರಾಮಸ್ಥರೊಂದಿಗೆ ಸೇರಿ ಹುಡುಕಲು ಆರಂಭಿಸಿದರು. ನೀಲಗಿರಿ ತೋಪಿನ ಬಳಿ ಚಿರತೆ ಕಾಟವಿದ್ದು ಚಿರತೆ ದಾಳಿ ನಡೆಸಿದೆಯೋ ಎಂಬ ಅನುಮಾನದಿಂದ ಅಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಗ್ರಾಮದ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯಲಕ್ಷ್ಮಿ ಶವ ಕಂಡು ಕೂಗಿಕೊಂಡಿದ್ದಾರೆ. ಕೂಡಲೇ ಎಲ್ಲರು ಅಲ್ಲಿಗೆ ಧಾವಿಸಿ ನೋಡಿದಾಗ ಗುದ್ದಲಿಯಿಂದ ವಿಜಯಲಕ್ಷ್ಮಿ ತಲೆಗೆ 3-4 ಬಾರಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಆ ವೇಳೆಗೆ ರಾತ್ರಿ 9 ಗಂಟೆಯಾಗಿದ್ದು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಹೆಚ್ಚುವರಿ ಸಬ್‌ಇನ್‌ಸ್ಪೆಕ್ಟರ್ ಕಿರಣ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಚಿದಾನಂದ ಸ್ವಾಮಿ, ವೃತ್ತ ನಿರೀಕ್ಷಕ ನಾಗರಾಜು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ವಿಜಯಲಕ್ಷ್ಮಿ ಅವರ ಮೈಮೇಲಿದ್ದ ಯಾವುದೇ ಒಡವೆಯೂ ಕಾಣೆಯಾಗಿಲ್ಲ. ಆಕೆ ದನ ಮೇಯಿಸಿಕೊಂಡು ಹಿಂದಿರುಗುವಾಗ ನೀಲಿಗಿರಿ ತೋಪಿಗೆ ಎಳೆದೊಯ್ದು ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಪ್ರಕರಣದ ತನಿಖೆಗೆ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಜೆಡಿಎಸ್ ಕಾರ್ಯಕರ್ತರಾದ ಎಸ್.ನಾರಾಯಣಸ್ವಾಮಿ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವೆ ಅನ್ಯೋನ್ಯ ಸಂಬಂಧವಿದ್ದು ಕೊಲೆಗೆ ಕಾರಣ ಯಾರಿರಬಹುದೆಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು.  ಮಹತ್ವದ ಸುಳಿವು: ವಿಜಯಲಕ್ಷಿ ಕೊಲೆ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರು ನಿನ್ನೆ ನೀಲಗಿರಿ ತೋಪಿನಿಂದ ಮೊಬೈಲ್ ಕರೆ ಮಾಡಿರುವವರ ವಿವರವನ್ನು ಟವರ್ ಮೂಲಕ ಪತ್ತೆ ಮಾಡಿ ಆರೋಪಿಯ ಸುಳಿವು ಪಡೆದಿದ್ದ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಇಂದು ಬೆಳಗ್ಗೆ ಆತನನ್ನು ಬಂಧಿಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin