ಮಾಜಿ ಸಚಿವ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವಿಜಯ್‍ಶಂಕರ್ ಬಿಜೆಪಿಗೆ ಬೈ ಬೈ

ಈ ಸುದ್ದಿಯನ್ನು ಶೇರ್ ಮಾಡಿ

Vijay-Shankar--01

ಬೆಂಗಳೂರು, ಅ.28-ಮಾಜಿ ಸಚಿವ, ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವಿಜಯ್‍ಶಂಕರ್ ಕೊನೆಗೂ ಬಿಜೆಪಿ ತೊರೆದಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ಬಿ.ಎಸ್.ಯಡಿಯೂರಪ್ಪಗೆ ರವಾನಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರೈತ ಮೋರ್ಚಾ ಸಮಾವೇಶದಲ್ಲಿ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದ ವಿಜಯ್‍ಶಂಕರ್ ಅವರು, ಬಿಜೆಪಿಗೆ ಗುಡ್‍ಬೈ ಹೇಳಿದ್ದು ಸದ್ಯದಲ್ಲೇ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಮಾಜಿ ಸಂಸದರಾಗಿದ್ದ ನನ್ನನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರಿನಿಂದ ಹಾಸನಕ್ಕೆ ಕ್ಷೇತ್ರ ಬದಲಾಯಿಸಿ ಹರಕೆಯ ಕುರಿ ಮಾಡಲಾಗಿತ್ತು. ಈ ಬಾರಿಯೂ ಕೂಡ ಪಿರಿಯಾಪಟ್ಟಣದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಮತ್ತೊಮ್ಮೆ ಬಲಿ ಪಶು ಮಾಡಲು ಹೊರಟಿದ್ದು ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ಮೂರೂವರೆ ವರ್ಷಗಳಿಂದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ವ್ಯಾಪಕವಾಗಿ ಸಂಘಟಿಸಿದ್ದು, ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷದ ಮುಖಂಡರು ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಕಣಕ್ಕಿಳಿಯುವಂತೆ ಮನವೊಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಕಣಕ್ಕಿಳಿದು ಜಯಿಸಲು ಸಾಧ್ಯವೇ? ಕಳೆದ ಬಾರಿ ನನ್ನನ್ನು ದೇವೇಗೌಡರ ವಿರುದ್ದ ಹಾಸನದಲ್ಲಿ ಕಣಕ್ಕಿಳಿಸಲಾಗಿತ್ತು. ಈ ಬಾರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಮುಂದೆ ಯಾರ ವಿರುದ್ದ ಸ್ಪರ್ಧಿಸಲು ನಮ್ಮನ್ನು ಬಲಿಪಶು ಮಾಡುತ್ತಾರೆ. ಬೇರೆಯವರನ್ನು ಬಾವಿಗೆ ತಳ್ಳಿ ಆಳ ನೋಡುವ ಪರಿ ನಮ್ಮ ನಾಯಕರದ್ದಾಗಿದೆ. ಅದಕ್ಕಾಗಿ ಮಾನಸಿಕವಾಗಿ ಬೇಸತ್ತು ಪಕ್ಷ ಬಿಡಲು ನಿರ್ಧರಿಸಿದ್ದೇನೆ.

ಫ್ಯಾಕ್ಸ್ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ. ಸದ್ಯದಲ್ಲೇ ಅವರನ್ನು ಭೇಟಿ ಮಾಡಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೂಡ ನೀಡುತ್ತೇನೆ ಎಂದು ಹೇಳಿದರು. 150 ಮಿಷನ್ ಗುರಿಯಿಟ್ಟುಕೊಂಡಿರುವ ಬಿಜೆಪಿಗೆ ಮೈಸೂರು ಪ್ರಾಂತ್ಯದಲ್ಲಿ ಸಿ.ಎಚ್.ವಿಜಯ್‍ಶಂಕರ್ ಅವರ ನಡೆ ಹಿನ್ನಡೆ ಮೂಡಿಸಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮಾಜಿ ಸಂಸದರು, ಹಿರಿಯ ಮುಖಂಡರೂ ಆದ ವಿಜಯ್‍ಶಂಕರ್ ಅವರು ಬಿಜೆಪಿಗೆ ಗುಡ್‍ಬೈ ಹೇಳುತ್ತಿರುವುದು ಮುಜುಗರ ತಂದಿದೆ.

ಕಳೆದ ಎರಡು ವಾರಗಳ ಹಿಂದೆಯೇ ವಿಜಯ್‍ಶಂಕರ್ ಅವರು ಪಕ್ಷ ತೊರೆಯುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಅವರ ಮನವೊಲಿಸುವ ಪ್ರಯತ್ನ ಮಾಡಲಾಯಿತಾದರೂ ಅದು ಫಲ ನೀಡಲಿಲ್ಲ. ಇಂದು ಅವರು ಪಕ್ಷ ಬಿಡಲು ನಿರ್ಧರಿಸಿ ರಾಜೀನಾಮೆ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin