ಮಾಜಿ ಸಭಾಧ್ಯಕ್ಷ ಬಿ.ಜಿ.ಬಣಕಾರ್ ನಿಧನಕ್ಕೆ ಸದನ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

santapa-session
ಬೆಂಗಳೂರು, ಫೆ.8- ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಬಿ.ಜಿ.ಬಣಕಾರ ಅವರ ನಿಧನಕ್ಕೆ ವಿಧಾನಮಂಡಲದ ಉಭಯ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿ ಬಣಕಾರ್ ಅವರು ನಿಧನರಾಗಿರುವ ವಿಷಯವನ್ನು ಸದನಕ್ಕೆ ತಿಳಿಸಿದರು. ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕು ಚಿಕ್ಕಣತಿಯಲ್ಲಿ ಜನಿಸಿದ ಬಣಕಾರ್ ಅವರು ಕಾನೂನು ಪದವೀಧರರಾಗಿದ್ದು, ನ್ಯಾಯವಾದಿಯಾಗಿ, ಕೃಷಿಕರಾಗಿದ್ದರು. ಕನ್ನಡ ಪ್ರೇಮಿಯಾಗಿದ್ದ ಅವರು ಬಡವರು, ದೀನ-ದಲಿತರು, ಹಿಂದುಳಿದವರ ಪರ ವಾದ ಮಂಡಿಸಿ ಖ್ಯಾತ ನ್ಯಾಯವಾದಿ ಎನಿಸಿಕೊಂಡಿದ್ದರು ಎಂದರು.

ಪಶು ವೈದ್ಯಕೀಯ, ಹೈನುಗಾರಿಕೆ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು. 1983ರಲ್ಲಿ ಪಕ್ಷೇತರರಾಗಿ, 1985ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಿಂದ 1989ರವರೆಗೆ ವಿಧಾನಸಭಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಭಾಧ್ಯಕ್ಷರ ಹುದ್ದೆಯನ್ನು ಸಮತೂಕದಿಂದ ನಿರ್ವಹಿಸಿದ್ದರು ಎಂಬ ಹೆಗ್ಗಳಿಕೆ ಪಡೆದಿದ್ದರು. ಗಾಂಧಿವಾದಿಯಾಗಿದ್ದ ಬಣಕಾರ್ ಅವರು ಸಹಕಾರ, ಸಾಹಿತ್ಯ, ಕೃಷಿ, ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿದ್ದರು ಎಂದು ಗುಣಗಾನ ಮಾಡಿದರು. ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಸ್‍ನಲ್ಲಿ ಪ್ರಯಾಣಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಸಚಿವರಾಗಿ, ಸಭಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದರು. ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರು ಎಂದು ಶ್ಲಾಘಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಮಾತನಾಡಿ, ಬಣಕಾರ್ ಅವರು ಗಾಂಧಿವಾದಿಯಾಗಿ, ಸರಳ-ಸಜ್ಜನಿಕೆ, ಸಹಕಾರ ಮೂರ್ತಿಯಾಗಿದ್ದರು. ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಆಶಿಸಿದರು. ಮೃತರ ಗೌರವಾರ್ಥ ಸದನದಲ್ಲಿ ಮೌನಾಚರಣೆ ನಡೆಸಲಾಯಿತು.

ಬಿಜೆಪಿಯ ಸಿ.ಟಿ.ರವಿ ಮಾತನಾಡಿ, ಬಣಕಾರ್ ಅವರು ವಿಧಾನಸಭಾ ಅಧ್ಯಕ್ಷರಾಗಿದ್ದಾಗ ನಾನು ಸಭಾಂಗಣದ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದ್ದೆ. ಆ ಸಂದರ್ಭದಲ್ಲಿ ಅವರ ನಡವಳಿಕೆ ನೋಡಿ ಪ್ರೇರಿತನಾಗಿ ನಾನೂ ಕೂಡ ಸಭಾಧ್ಯಕ್ಷನಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಆದರೆ, ಈಗ ನಮ್ಮಲ್ಲಿ ವಿಶ್ವೇಶರಹೆಗಡೆ ಕಾಗೇರಿ ಮಾರ್ಗದರ್ಶಕರಾಗಿದ್ದು, ಅವರು ಆ ಹುದ್ದೆಯ ಆಕಾಂಕ್ಷಿಯಾಗಿರುವುದರಿಂದ ನಾನು ಆಸೆ ಬಿಟ್ಟಿದ್ದೇನೆ ಎಂದು ಹೇಳಿದರು. ಪಿ.ರಾಜೀವ್ ಅವರು ಮಾತನಾಡಿ, ಬಣಕಾರ್ ಅವರು ನುಡಿದಂತೆ ನಡೆದ ವ್ಯಕ್ತಿ. ಅತ್ಯಂತ ಸರಳ ಜೀವಿ ಎಂದು ಕೊಂಡಾಡಿದರು. ವಿಶ್ವೇಶರಹೆಗಡೆ ಕಾಗೇರಿ ಮಾತನಾಡಿ, ಯಾವುದೇ ವಿಷಯವನ್ನಾದರೂ ಸಮಗ್ರ ಅಧ್ಯಯನ ಮಾಡಿ ವಿಷಯ ಮಂಡಿಸುತ್ತಿದ್ದರು. ಅಂಕಿ-ಅಂಶಗಳ ಸಹಿತ ಲೇಖನ ಬರೆಯುತ್ತಿದ್ದ ಅವರ ಶೈಲಿ ನಮಗೆಲ್ಲಾ ಮಾರ್ಗದರ್ಶನವಾಗಿತ್ತು ಎಂದು ಹೇಳಿದರು. ಪರಿಷತ್: ಕಲಾಪದ ಆರಂಭದಲ್ಲಿ ಬಣಕಾರ್ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಬಣಕಾರ್ ನಿಧನದಿಂದ ಒಬ್ಬ ಹಿರಿಯ, ಸಭ್ಯ, ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.

Facebook Comments

Sri Raghav

Admin