ಮಾಡೆಲಿಂಗ್‍ ನಲ್ಲಿ ಮಿಂಚುತ್ತಿರುವ ಮಲೆನಾಡಿನ ಬಾಡಿಬಿಲ್ಡರ್ ಭರತ್‍ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

body-2
ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಏಕೆಂದರೆ ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ. ಹಾಗೆಯೇ ನಮ್ಮ ಸಾಮರ್ಥ್ಯದ ಮೇಲೆ ನಮಗೆ ಸದಾ ಆತ್ಮವಿಶ್ವಾಸವಿರಲಿ ಎಂಬ ಡಾ.ಶಿವರಾಮಕಾರಂತರ ಮಾತು ಕೆಲವರ ಜೀವನಕ್ಕೆ ಅನ್ವರ್ಥವೆನಿಸುತ್ತದೆ. ಅಂತಹವರ ಸಾಲಿಗೆ ಸೇರುವವರೇ ಮಲೆನಾಡು ಮೂಲದ ಭರತ್‍ಗೌಡ. ಸ್ವಸಾಮರ್ಥ್ಯದಿಂದ ಅಸಾಧಾರಣ ಪ್ರತಿಭೆಯೊಂದಿಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು, ಯಾರ ಮೇಲೂ ಅವಲಂಬಿತರಾಗದೆ ಜೀವನದ ಹಾದಿ ಕಂಡುಕೊಂಡು ಭವಿಷ್ಯ ರೂಪಿಸಿಕೊಂಡವರು. ಶೃಂಗೇರಿಯ ಕಿಗ್ಗಾ ಬಳಿಯ ಕೋಗಿನ್‍ಬೈಲು ಎಂಬ ಪುಟ್ಟ ಹಳ್ಳಿಯಿಂದ ಆರಂಭವಾದ ಇವರ ಸಾಹಸಗಾಥೆ ಇಂದು ಹಲವರಿಗೆ ಫಿಟ್‍ನೆಸ್ ಕ್ಷೇತ್ರದಲ್ಲಿ ಮಾರ್ಗದರ್ಶನ ಮಾಡುವ ಹಂತಕ್ಕೆ ಬಂದು ತಲುಪಿದೆ.

ದೇಹದಾಢ್ರ್ಯ ಪಟು ಹಾಗೂ ಮಾಡೆಲ್ ಆಗಿರುವ ಭರತ್‍ಗೌಡ ಫಿಟ್‍ನೆಸ್ ಇನ್‍ಸ್ಟ್ರಕ್ಟರ್ ಆಗಿಯೂ ಮಿಂಚುತ್ತಿದ್ದಾರೆ. ಪದವಿ ವಿದ್ಯಾಭ್ಯಾಸದ ವೇಳೆ ಆದ ಅಡಚಣೆಯಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತಾದರೂ ಅಷ್ಟಕ್ಕೇ ಎದೆಗುಂದದೆ ಏನನ್ನಾದರೂ ಸಾಧಿಸಿ ತಮ್ಮನ್ನು ಅವಮಾನಿಸಿದವರ ಮುಂದೆಯೇ ಹೆಮ್ಮರವಾಗಿ ಬೆಳೆದು ನಿಂತು ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ದೇಹದ ಫಿಟ್‍ನೆಸ್‍ನ್ನು ಆರೋಗ್ಯಕರವಾಗಿ ಅದರಲ್ಲೂ ಯಾವುದೇ ಅಡ್ಡ ಪರಿಣಾಮವಿಲ್ಲದೆ ಹೇಗೆ ಕಾಪಾಡಿಕೊಳ್ಳಬಹುದು, ಇದಕ್ಕಾಗಿ ಯಾವ ರೀತಿಯ ಡಯಟ್ ಮಾಡಬೇಕು. ಇನ್ನಿತರ ಫಿಟ್‍ನೆಸ್ ಕುರಿತ ವಿಷಯಗಳನ್ನು ಟಿವಿ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ತಿಳಿಸಿಕೊಡುತ್ತಿದ್ದಾರೆ.

body-1

ಏಕಾಏಕಿ ಮನೆ ಬಿಟ್ಟು ಬಂದರೂ ತಮ್ಮ ನಿರಂತರ ಪರಿಶ್ರಮದಿಂದ ಆಸಕ್ತಿ ಇದ್ದ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದರು. ಕಾಲೇಜು ದಿನಗಳಲ್ಲೇ ಜಿಮ್‍ನಲ್ಲಿ ದೇಹ ಪಳಗಿಸುತ್ತಿದ್ದ ಅವರು ಮುಂದೆ ಇದೇ ರೀತಿ ದೇಹ ದಂಡಿಸಿ ದೇಹದಾಢ್ರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮುಂಬೈನ ಜೆರಾಯ್ ಪುರುಷರ ಫಿಟ್‍ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಮುಂದೆ ಇಂತಹ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾ 2017ರ ಮಿಸ್ಟರ್ ಕರ್ನಾಟಕ ಸ್ಪರ್ಧೆಯಲ್ಲೂ ವಿಜೇತರಾಗಿದ್ದಾರೆ. ಇದರೊಂದಿಗೆ ಫಿಟ್‍ನೆಸ್ ಕ್ಷೇತ್ರದಲ್ಲಿ ಗಳಿಸಿದ ಅಪಾರ ಅನುಭವದಿಂದ ಇಂದು ಯುವಜನರಿಗೆ ಕನ್ನಡದ ಸುದ್ದಿವಾಹಿನಿಯೊಂದರಲ್ಲಿ ಸಲಹೆ ಸೂಚನೆ ನೀಡುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.ಫಿಟ್‍ನೆಸ್ ಕುರಿತಾದ ಈ ಕಾರ್ಯಕ್ರಮದಲ್ಲಿ ಇವರ ಫಿಟ್‍ನೆಸ್ ಹೊಂದಲು ಅಗತ್ಯವಿರುವ ಮಾರ್ಗಸೂಚಿಗಳನ್ನು ಹೇಳುತ್ತಾ ಯುವಜನರಿಗೆ ಈ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದಾರೆ.

ಬೆಂಗಳೂರಿನಂತಹ ಬೃಹತ್ ನಗರಕ್ಕೆ ಬಂದು ಜೀವನ ರೂಪಿಸಿಕೊಳ್ಳುವುದು ಅಷ್ಟೇನೂ ಸುಲಭದ ಮಾತಲ್ಲ. ಬರಿಗೈಯಲ್ಲಿ ನಗರಕ್ಕೆ ಬಂದರೂ ದುಡಿದು ಜೀವನ ನಿರ್ವಹಣೆ ಜತೆಜತೆಗೆ ತಮ್ಮ ಆಸೆಯನ್ನು ಕಾಪಿಟ್ಟುಕೊಂಡು ಹೆಜ್ಜೆ ಹಾಕಿದರು.ಆದರೆ ಅವರಲ್ಲಿದ್ದ ದೃಢ ಮನಸ್ಸು, ಆತ್ಮವಿಶ್ವಾಸ, ಕರ್ತವ್ಯನಿಷ್ಠೆ ಹಾಗೂ ಛಲದಿಂದ ಎಲ್ಲವನ್ನೂ ಸಾಧಿಸುತ್ತಾ ಮುನ್ನಡೆದಿದ್ದಾರೆ. ಮೂಲತಃ ಕೃಷಿಯನ್ನು ಅವಲಂಬಿಸಿದ ಕುಟುಂಬದಿಂದ ಬಂದ ಇವರಿಗೆ ಮನೆಯಿಂದ ಹೆಚ್ಚಿನ ಪ್ರೋತ್ಸಾಹವೇನು ದೊರೆತಿರಲಿಲ್ಲ. ಒಂದು ರೀತಿ ನಿರಾಸೆ. ಆಸೆಗೆ ತಣ್ಣೀರೆರಚಿದವರೇ ಹೆಚ್ಚಾದರೂ ಅಂದುಕೊಂಡಿದ್ದನ್ನು ಮಾಡಿ ತೀರಬೇಕೆಂಬ ಛಲದೊಂದಿಗೆ ಗುರಿ ಇಟ್ಟುಕೊಂಡು ಮುನ್ನಡೆದಿದ್ದ ಇವರ ದಿಟ್ಟತನಕ್ಕೆ ಮೆಚ್ಚಿ ಸೆಂಟ್ರಸ್ ಲೈಫ್‍ಸ್ಟೈಲ್ ಬ್ರಾಂಡ್ ಕಂಪೆನಿಯ ಸಿಇಒ ಕೃಷ್ಣದಾಸ್ ಬೆನ್ನೆಲುಬಾಗಿ ನಿಂತರು. ಪ್ರತಿಷ್ಠಿತ EDHARDY ಗಾರ್ಮೆಂಟ್ಸ್ ಬ್ರಾಂಡ್‍ಗೆ 2016ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮಾಡೆಲ್ ಆಗಿ ಆಯ್ಕೆಯಾದರು. ಇವರ ಸಾಧನೆ ಹುಟ್ಟೂರಿಗೂ ತಲುಪಿ ಮೆಚ್ಚುಗೆಗೆ ಪಾತ್ರವಾಯಿತಲ್ಲದೆ, ಕುಟುಂಬ ವರ್ಗದವರಲ್ಲದೆ ಊರಿನ ಜನರ ಪ್ರೀತಿಗೂ ಭಾಜನರಾಗಿ ಮಾಡೆಲ್ ಆಫ್ ಮಲೆನಾಡು ಪ್ರಶಸ್ತಿ ಗಳಿಸಿ ತವರೂರಿಗೂ ಹೆಮ್ಮೆ ಎನಿಸಿದ್ದಾರೆ.

ಸಾಧನೆಗಳ ಸಾಲನ್ನು ಸರಿಗಟ್ಟುತ್ತಾ ಮುನ್ನಡೆದಿರುವ ಭರತ್‍ಗೌಡ ತಮ್ಮ ಈ ಕ್ಷೇತ್ರದಲ್ಲಿ ಮತ್ತಷ್ಟು ಮೈಲಿಗಲ್ಲುಗಳನ್ನು ಸಾಧಿಸಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಅಂತಹ ಅವರ ಎಲ್ಲಾ ಕನಸುಗಳು ನನಸಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಮುಂದೆ ಫಿಟ್‍ನೆಸ್ ಕ್ಲಬ್ ಆರಂಭಿಸುವ ಚಿಂತನೆ ಹೊಂದಿರುವ ಇವರು ಯೂಟ್ಯೂಬ್, ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಫಿಟ್‍ನೆಸ್ ಕುರಿತಂತೆ ಎಲ್ಲ ರೀತಿಯ ಮಾಹಿತಿ ಒದಗಿಸುವ ಪ್ರಯತ್ನದಲ್ಲಿದ್ದಾರೆ. ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಹಲವಾರು ಮಂದಿ ಡಯಟ್ ಹಾಗೂ ದೇಹದಾಢ್ರ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಾಗ ಸೂಕ್ತ ಮಾರ್ಗದರ್ಶನ ದೊರೆಯದೆ ಪರದಾಡುವವರೇ ಹೆಚ್ಚು. ಕೆಲವು ವೇಳೆ ಮಿಸ್‍ಗೈಡ್‍ನಿಂದಾಗಿ ಹೆಚ್ಚು ತೊಂದರೆಗೂ ಒಳಗಾಗುತ್ತಾರೆ. ಇಂತಹ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಲು ಬಯಸುತ್ತೇನೆ ಎನ್ನುತ್ತಾರೆ ಭರತ್‍ಗೌಡ. ಅಲ್ಲದೆ, ಮಲೆನಾಡ ಹುಡುಗರಿಗಾಗಿ ಏನನ್ನಾದರೂ ಮಾಡಬಯಸುವ ಇವರು, ಮಲೆನಾಡಿನ ಯುವಜನರ ಮಾಡೆಲಿಂಗ್ ಆಸಕ್ತಿಗೆ ನೀರೆರೆದು ಪೋಷಿಸುವ ಇಚ್ಛೆ ಹೊಂದಿದ್ದಾರೆ. ಸಾಧನೆಗಳ ಶಿಖರ ಏರುವ ನಡುವೆಯೂ ಭವಿಷ್ಯದ ಬೆನ್ನೆಲುಬಾಗುವ ವಿದ್ಯಾಭ್ಯಾಸವನ್ನು ಕಡೆಗಣಿಸದೆ ಅದನ್ನು ಮುಂದುವರೆಸಿ ಪದವಿಗಳಿಸಿದ್ದಲ್ಲದೆ, ಫಿಟ್‍ನೆಸ್‍ನಲ್ಲಿ ಅಮೆರಿಕದ ಏಸ್‍ನಿಂದ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ್ದಾರೆ. ಕಳೆದ ವರ್ಷ ಮಸಲ್ ಮೇನಿಯಾ ಮುಂಬೈ ಸ್ಪರ್ಧೆ, ಮುಂಬೈನಲ್ಲಿ ನಡೆದ ಬಾಡಿ ಪವರ್ ಎಕ್ಸ್‍ಪೋನಲ್ಲಿ ಕರ್ನಾಟಕದಿಂದ ಹಾಗು ಮಿ.ಇಂಡಿಯಾ ಮಾಡೆಲ್‍ನಲ್ಲಿ ಸ್ಪರ್ಧಿಸಿ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.

ಜೀವನದ ಏಳುಬೀಳುಗಳನ್ನು ಎದುರಿಸುತ್ತಾ, ಬಂದ ಸಮಸ್ಯೆಯನ್ನು ಹಿಮ್ಮೆಟ್ಟಿ ನಿಂತು ಅಂದುಕೊಂಡಿದ್ದನ್ನು ಮಾಡಲು ಹಿಂದೇಟು ಹಾಕದೆ ಮುನ್ನಡೆಯಲು ಬೇಕಿರುವುದು ಇಚ್ಛಾಶಕ್ತಿ. ಇದು ಸ್ಫೂರ್ತಿಯ ಸೆಲೆಯಂತೆ ಮನುಷ್ಯನನ್ನು ಸದಾ ಜಾಗೃತವಾಗಿರಿಸುತ್ತದೆ. ತಮ್ಮಲ್ಲಿ ನಿರಂತರವಾಗಿ ಕಾಯ್ದಿಟ್ಟುಕೊಂಡ ಈ ತುಡಿತದಿಂದ ಇಂದಿಗೂ ಇನ್ನಷ್ಟು ಸಾಧಿಸುವ ಮನೋಭಾವ ಹೊಂದಿದ್ದಾರೆ ಭರತ್.
ಜೀವನದಲ್ಲಿ ಸೋಲು ಕಂಡವರ ಕಥೆಗಳಿಂದ ನಮಗೆ ದಾರಿ ಗೋಚರಿಸುತ್ತದೆ. ಅದೇ ರೀತಿ ಯಶಸ್ವಿಯಾದವರ ಕಥೆಗಳಿಂದ ನಮಗೊಂದು ಸಂದೇಶ ಸಿಗುತ್ತದೆ. ಈ ಎರಡೂ ಸಹ ಯಾವಾಗಲೂ ನಮ್ಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿರುತ್ತದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಂತಿದ್ದಾರೆ ಇವರು.

Facebook Comments

Sri Raghav

Admin