ಮಾದಕ ವ್ಯಸನಿಗಳ ನಗರವಾಗುತ್ತಿದೆ ಸಿಲಿಕಾನ್ ಸಿಟಿ ಬೆಂಗಳೂರು..!

ಈ ಸುದ್ದಿಯನ್ನು ಶೇರ್ ಮಾಡಿ

Bang-Drugs

ಬೆಂಗಳೂರು, ಡಿ.12- ಮಾದಕ ವಸ್ತುಗಳ ರಾಜಧಾನಿ ಎಂದು ಒಂದು ಕಾಲದಲ್ಲಿ ಪಂಜಾಬ್ ಅಪಕೀರ್ತಿಗೆ ಗುರಿಯಾಗಿತ್ತು. ಈಗ ಅದನ್ನೂ ಮೀರಿಸುವಂತೆ ಬೆಂಗಳೂರು ಮಾದಕ ವ್ಯಸನಿಗಳ ನಗರವಾಗುತ್ತಿದೆ. ಐಟಿ ಸಿಟಿ, ಗಾರ್ಡ್‍ನ್‍ಸಿಟಿ ಬೆಂಗಳೂರು ಕಿಕ್ ಸಿಟಿಯಾಗಿ ಬದಲಾಗಿದ್ದು, ಬ್ರೌನ್‍ಶುಗರ್, ಗಾಂಜಾ, ಅಫೀಮು, ಚೆರಸ್‍ನಂತಹ ಮತ್ತೇರಿಸಿ ಜೀವನವನ್ನೇ ಹಾಳು ಮಾಡುವ ಮಾದಕ ವಸ್ತುಗಳು ಎಗ್ಗಿಲ್ಲದೆ ದೊರೆಯುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾದಕ ವಸ್ತುಗಳು ದೊರೆಯುವ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಕಣ್ಣಿಗೆ ಕಂಡು ಪತ್ತೆಯಾದ ಪ್ರಕರಣಗಳು 300ದಾಟಿದ್ದು, ಪತ್ತೆಯಾಗದಿರುವ ಪ್ರಕರಣಗಳು ಅದೆಷ್ಟೋ.

ಬೆಂಗಳೂರು ನಗರದಲ್ಲಿ ಈ ವರ್ಷ 318 ಪ್ರಕರಣಗಳು ದಾಖಲಾಗಿದ್ದು, 576 ಮಂದಿಯನ್ನು ಬಂಧಿಸಲಾಗಿದೆ. 500 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ 128 ಪ್ರಕರಣಗಳನ್ನು ದಾಖಲಿಸಿ 305 ಆರೋಪಿಗಳನ್ನು ಬಂಧಿಸಿ 375 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೊಕೈನ್, ಹೆರಾಯಿನ್, ಅಫೀಮ್, ಚರಸ್‍ನಂತಹ ಮಾದಕ ವಸ್ತುಗಳು ಉತ್ತರ ಭಾರತದಿಂದ ತರಲಾಗುತ್ತಿದೆ. ಗಾಂಜಾದಂತಹ ಮಾದಕ ವಸ್ತುಗಳು ನೆರೆಯ ರಾಜ್ಯಗಳಿಂದ ಇಲ್ಲಿಗೆ ಬರುತ್ತಿದೆ ಎಂದು ಪೂರ್ವ ವಿಭಾಗದ ಹೆಚ್ಚವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾದಕ ವಸ್ತು ಪೂರೈಕೆ ಪ್ರಕರಣಗಳ ಮೂಲವನ್ನು ಪತ್ತೆಹಚ್ಚಲು ಬೆಂಗಳೂರು ಪೊಲೀಸರು ಕೇಂದ್ರ ಸರ್ಕಾರದ ಎನ್‍ಸಿಬಿ ತಂಡದದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸ್ಥಳೀಯವಾಗಿ ಜಾಗೃತಿ ಮೂಡಿಸಲು ಪ್ರತಿ ಕಾಲೇಜು ಮಟ್ಟದಲ್ಲೂ ಡಿಸಿಪಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಕಾಲ ಕಾಲಕ್ಕೆ ಸಭೆಗಳನ್ನು ಮಾಡಿ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಡಿಸಿಪಿಯೊಬ್ಬರ ನೇತೃತ್ವದ ಅಪರಾಧ ಪತ್ತೆದಳ ಇದರ ಮೇಲೆ ನಿಗಾ ವಹಿಸಿದ್ದು, 1098 ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಪೊಲೀಸರು ನಿರಂತರ ಶ್ರಮವಹಿಸುತ್ತಿರುವ ನಡುವೆಯೂ ಮಾದಕ ವಸ್ತುಗಳ ಪ್ರಕರಣಗಳು ಮೂರುಪಟ್ಟು ಹೆಚ್ಚಾಗಿದೆ. ಆದರೆ, ಆತಂಕ ಪಡುವಂತಹ ವಾತಾವರಣ ನಿರ್ಮಾಣವಾಗಿಲ್ಲ. ನಾವು ಶಿಸ್ತಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಭರವಸೆ ನೀಡಿದರು. ಮಾದಕ ವಸ್ತುಗಳ ಚಟಕ್ಕೆ ಬಿದ್ದ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ ಕೊಡಿಸಲಾಗುತ್ತಿದೆ. ದಾರಿ ತಪ್ಪಿದ ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಲಾಗುತ್ತಿದೆ. ಮಾದಕ ವಸ್ತುಗಳನ್ನು ಹೊಂದಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಒಂದು ಕಾಲದಲ್ಲಿ ಪಂಜಾಬ್ ಮಾದಕ ವಸ್ತುಗಳಿಗೆ ಕುಖ್ಯಾತಿ ಪಡೆದಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಮುಖ ವಿಷಯವಾಗಿ ಚರ್ಚೆಯಾಗಿ ಆಡಳಿತಾರೂಢ ಪಕ್ಷ ಸೋಲುಕಂಡು ಈಗ ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಂಜಾಬ್‍ನಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿರುವ ಹಂತದಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಪೊೀಷಕರನ್ನು ಇದು ತೀವ್ರ ಆತಂಕಕ್ಕೀಡುಮಾಡಿದ್ದು, ಪೊಲೀಸರು ಕಾಲಕಾಲಕ್ಕೆ ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ.

Facebook Comments

Sri Raghav

Admin